ಹಿರೇಕಣಗಿ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಮಂಜೂರು

KannadaprabhaNewsNetwork |  
Published : Jun 22, 2025, 01:19 AM IST
0000 | Kannada Prabha

ಸಾರಾಂಶ

ಕಳೆದ ವರ್ಷ ಮೊದಲ ಹಂತದಲ್ಲಿ ರಾಜ್ಯದಲ್ಲಿ ಹೊಸದಾಗಿ 20 ಪಶು ಚಿಕಿತ್ಸಾಲಯಗಳಿಗೆ ಮಂಜೂರಾತಿ ನೀಡಿದ್ದ ಸಂದರ್ಭದಲ್ಲಿ ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಿ ಆ ಭಾಗದ ಬಹುದಿನದ ಬೇಡಿಕೆ ಈಡೇರಿಸಲಾಗಿತ್ತು

ಹಾನಗಲ್ಲ: ತಾಲೂಕಿನ ಹಿರೇಕಣಗಿ ಗ್ರಾಮದಲ್ಲಿ ನೂತನವಾಗಿ ಪಶು ಚಿಕಿತ್ಸಾಲಯ ಆರಂಭಿಸಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನೂತನ ಪಶು ಚಿಕಿತ್ಸಾಲಯದಿಂದ ಹಿರೇಕಣಗಿ, ಬಿದರಕೊಪ್ಪ, ಗೊಟಗೋಡಿ, ಹಂದಿಹಾಳ, ಆರೆಗೊಪ್ಪ, ಚಿಕ್ಕೇರಿಹೊಸಳ್ಳಿ, ಹುಣಶೆಟ್ಟಿಕೊಪ್ಪ, ಕಾಮನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮೊದಲ ಹಂತದಲ್ಲಿ ರಾಜ್ಯದಲ್ಲಿ ಹೊಸದಾಗಿ 20 ಪಶು ಚಿಕಿತ್ಸಾಲಯಗಳಿಗೆ ಮಂಜೂರಾತಿ ನೀಡಿದ್ದ ಸಂದರ್ಭದಲ್ಲಿ ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಆರಂಭಿಸಿ ಆ ಭಾಗದ ಬಹುದಿನದ ಬೇಡಿಕೆ ಈಡೇರಿಸಲಾಗಿತ್ತು. ಎರಡನೆ ಹಂತದಲ್ಲಿ ಮತ್ತೆ ಹೊಸದಾಗಿ 20 ಪಶುಚಿಕಿತ್ಸಾಲಯ ಮಂಜೂರಿಯಾಗಿದ್ದ ಸಂದರ್ಭದಲ್ಲಿ ಮಾಸನಕಟ್ಟಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಆರಂಭಿಸಲಾಗಿತ್ತು. ಇದೀಗ ಮತ್ತೆ ಹಿರೇಕಣಗಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯಕ್ಕೆ ಮಂಜೂರಾತಿ ದೊರೆತಿದ್ದು, ಕಳೆದ ಎರಡು ವರ್ಷಗಳಲ್ಲಿ ತಾಲೂಕಿನಲ್ಲಿ ಹೊಸದಾಗಿ ಒಟ್ಟು ಮೂರು ಪಶು ಚಿಕಿತ್ಸಾಲಯಗಳಿಗೆ ಮಂಜೂರಾತಿ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.

ನಬಾರ್ಡ್ ಆರ್.ಐ.ಡಿ.ಎಫ್.ಯೋಜನೆಯಡಿ ನರೇಗಲ್ ಗ್ರಾಮದ ಪಶು ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ₹ 50 ಲಕ್ಷ, ಕೂಸನೂರಿನ ಪಶು ಚಿಕಿತ್ಸಾಲಯಕ್ಕೆ ₹ 60 ಲಕ್ಷ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ವಿವರಿಸಿದ್ದಾರೆ.

ಸಂಚಾರಿ ಪಶು ಸಂಜೀವಿನಿ ವಾಹನಕ್ಕೂ ವೈದ್ಯರನ್ನು ನಿಯೋಜಿಸಿ ತಾಲೂಕಿನಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ರೋಗಪೀಡಿತ ಜಾನುವಾರುಗಳಿಗೆ ತುರ್ತು ಸೇವೆ ದೊರಕಿಸಲಾಗುತ್ತಿದೆ ಎಂದು ತಿಳಿಸಿರುವ ಶ್ರೀನಿವಾಸ ಮಾನೆ, ಕಳೆದ ವರ್ಷ ಶೇ.50 ರಷ್ಟು ರಿಯಾಯಿತಿ ದರದಲ್ಲಿ 50 ಮೇವು ಕಟಾವು ಯಂತ್ರ ವಿತರಿಸಲಾಗಿತ್ತು. ಈ ವರ್ಷ ಮತ್ತೆ 50 ಯಂತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿ ಸ್ವೀಕರಿಸಿದ್ದಾರೆ. ಹಾಗಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಹೆಚ್ಚು, ಹೆಚ್ಚು ಹಾಲು ಉತ್ಪಾದನೆ ಮಾಡಲು ಪೂರಕ ವಾತಾವರಣ ಸೃಷ್ಟಿಗೆ ಒತ್ತು ನೀಡಲಾಗಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಈವರೆಗೆ ಮೃತ 30 ಜಾನುವಾರುಗಳಿಗೆ ಅನುಗ್ರಹ ಯೋಜನೆಯಡಿ ₹3.40 ಲಕ್ಷ ಪರಿಹಾರ ವಿತರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ. ಜಾನುವಾರು ಆಕಸ್ಮಿಕವಾಗಿ ಮರಣ ಹೊಂದಿದರೆ ರೈತರ ಆರ್ಥಿಕ ಸಂಕಷ್ಟ ಸರಿದೂಗಿಸಲು ಸರ್ಕಾರ ನೀಡುತ್ತಿದ್ದ ₹ 10 ಸಾವಿರ ಪರಿಹಾರವನ್ನು ₹ 15 ಸಾವಿರಕ್ಕೆ ಹಾಗೂ ಕುರಿ, ಮೇಕೆ ಸಾವಿಗೀಡಾದರೆ ನೀಡುತ್ತಿದ್ದ ಪರಿಹಾರವನ್ನು ₹ 5 ರಿಂದ ₹ 7.5 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಶಾಸಕ ಮಾನೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ