ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕೊಡಗಿನ ಡಿಸಿಸಿ ಬ್ಯಾಂಕ್ ಗೆ ಸುಮಾರು 102 ವರ್ಷಗಳ ಇತಿಹಾಸವಿದೆ. ಜನಪ್ರತಿನಿಧಿಗಳು ಜನರಿಗೆ ನೇರವಾಗಿ ಜನರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಸಹಕಾರಿ ಸಂಘಗಳ ಮೂಲಕ ಸಾರ್ವಜನಿಕರಿಗೆ ಸೇವೆ ಮಾಡಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಯುವಕರನ್ನು ಸದಸ್ಯರಾಗಿ ಮಾಡಿಕೊಳ್ಳಬೇಕು. ಡಿಸಿಸಿ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಮಾಡಬೇಕು ಹೇಳಿದರು.
ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ ಡಿಸಿಸಿ ಬ್ಯಾಂಕ್ ಮೂಲಕ 1974ರಲ್ಲಿ ರು.3 ಕೋಟಿ ಸಾಲ ನೀಡುತ್ತಿದ್ದೇವೆ. ಆದರೆ ಈಗ ಸುಮಾರು ಸಾವಿರಾರು ಕೋಟಿ ರೂಪಾಯಿ ಸಾಲ ನೀಡುತ್ತಿದ್ದೇವೆ. ಇದು ಡಿಸಿಸಿ ಬ್ಯಾಂಕ್ ನ ಬೆಳವಣಿಗೆ. ಸಹಕಾರಿ ಸಂಘದಲ್ಲಿ ಯಾವುದೇ ರಾಜಕೀಯ ನುಸುಳಬಾರದು. ಕೊಡಗು ಡಿಸಿಸಿ ಬ್ಯಾಂಕ್ ಇಂದಿಗೂ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ನೋಂದಣಿಯಾದ ಸಹಕಾರ ಸಂಘಗಳಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ಮಾಡುವುದು ಸರಿಯಲ್ಲ ಹೇಳಿದರು.ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಬಾಂಡ್ ಗಣಪತಿ ಪ್ರಸ್ತಾವಿಕವಾಗಿ ಮಾತನಾಡಿ ಕೊಡಗು ಡಿಸಿಸಿ ಬ್ಯಾಂಕ್ ನಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಸೌಲಭ್ಯ ಮಾಡಲಾಗಿದೆ. ಕೋವಿಡ್ ಹಾಗೂ ಪ್ರಕೃತಿ ವಿಕೋಪ ಸಂದರ್ಭ ಹಲವರಿಗೆ ಆರ್ಥಿಕ ಸಹಾಯವನ್ನು ಬ್ಯಾಂಕ್ ನಿಂದ ನೀಡಲಾಗಿದೆ. ಕಳೆದ ಎರಡು ದಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಲ ಮೇಳದಲ್ಲಿ 577 ವಾಹನಗಳಿಗೆ ಸುಮಾರು ರು.40 ಕೋಟಿ ಸಾಲ ನೀಡಲಾಗಿರುವುದು ಈ ಮೇಳದ ವಿಶೇಷ ಎಂದು ತಿಳಿಸಿದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಡಿಸಿಸಿ ಬ್ಯಾಂಕ್ ನ ಕಾವೇರಿ ಸಿರಿಯಲ್ಲಿ ಯೋಜನೆಯಲ್ಲಿ ಶೇ.8.5 ಬಡ್ಡಿ ನೀಡಲಾಗುತ್ತಿದೆ. ಆದ್ದರಿಂದ ಹಿರಿಯರು ಠೇವಣಿ ಇಡಬೇಕು. ದೇಶ ಆರ್ಥಿಕವಾಗಿ ಸಬಲವಾಗಬೇಕಾದರೆ ಸಣ್ಣ ಪ್ರಮಾಣದಲ್ಲಿ ಸಾಲ ನೀಡಬೇಕೆಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಸಹಕಾರ ಸಂಘಗಳ ಹಿರಿಯ ಅಧಿಕಾರಿ ಎಸ್.ಸಿ. ದಿವಾಕರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ರಮೇಶ್ ಬಾಬು, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ ಮನವಟ್ಟಿರ ಬೆಳ್ಯಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ ಮತ್ತಿತರರು ಹಾಜರಿದ್ದರು. ಉನ್ನತಿ ಭವನ ಉದ್ಘಾಟನೆ ನಗರದ ರಾಜಾಸೀಟ್ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಉನ್ನತಿ ಭವನವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯ ಪ್ರತಿಮೆಯನ್ನು ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ಮನೆಗಳಲ್ಲಿ ದೀಪ ಹಚ್ಚಿ...ಸೋಮವಾರ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗುತ್ತಿದೆ. 400 ವರ್ಷಗಳ ಕಾಲ ನ್ಯಾಯಯುತ ಹೋರಾಟದ ಮೂಲಕ ಲಕ್ಷಾಂತರ ಮಂದಿಯ ತ್ಯಾಗದ ಮೂಲಕ ದೇವಾಲಯ ನಿರ್ಮಾಣ ಆಗಿ ಪ್ರಾಣ ಪ್ರತಿಷ್ಠೆಯಾಗುತ್ತಿದೆ. ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕೆಂದು ಸಂಸದ ಪ್ರತಾಪ ಸಿಂಹ ಡಿಸಿಸಿ ಬ್ಯಾಂಕ್ ಉನ್ನತಿ ಭವನ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಮೈಸೂರು-ಕುಶಾಲನಗರ ಚತುಷ್ಪತ ರಸ್ತೆ ಮುಂದಿನ 15 ತಿಂಗಳೊಳಗೆ ಲೋಕಾರ್ಪಣೆಯಾಗಲಿದೆ. ಸಂಪಾಜೆಯಿಂದ - ಮಾಣಿ ವರೆಗೆ ಕೂಡ 4 ಲೈನ್ ರಸ್ತೆ ಆಗಲಿದೆ ಎಂದು ಇದೇ ಸಂದರ್ಭ ತಿಳಿಸಿದರು.