ಯಲಬುರ್ಗಾ: ಏಕಾಗ್ರತೆಯಿಂದ ಅಧ್ಯಯನ ಮಾಡದೇ ಜೀವನದಲ್ಲಿ ಯಶಸ್ಸು ಸಾಧಿಸಲು ಅಸಾಧ್ಯ ಎಂದು ಕೊಪ್ಪಳ ವಿವಿ ಕುಲಸಚಿವ ಎಸ್.ವಿ. ಡಾಣಿ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್, ಡಾ. ಎಪಿಜೆ ಅಬ್ದುಲ್ ಕಲಾಂ, ಸಿದ್ದಯ್ಯ ಪುರಾಣಿಕರಂತಹ ಮಹನೀಯರನ್ನು ವಿದ್ಯಾರ್ಥಿಗಳು ಆದರ್ಶವಾಗಿ ಇಟ್ಟುಕೊಳ್ಳಬೇಕು. ಏಕಾಗ್ರಚಿತ್ತದಿಂದ ಓದದೆ ಯಾರೊಬ್ಬರೂ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರಚಿತ್ತದಿಂದ ವ್ಯಾಸಂಗ ಮಾಡುವ ಮೂಲಕ ಬದುಕಿನಲ್ಲಿ ಅಭ್ಯುದಯ ಕಾಣಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಪ್ಪಳ ವಿಶ್ವವಿದ್ಯಾಲಯವು ಈ ಭಾಗದ ವಿದ್ಯಾರ್ಥಿಗಳಿಗೆ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕ ಹಾಗೇ ಆಗಿದೆ. ಹೀಗಾಗಿ ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಜಾಗತಿಕ ಸಂಗತಿ ಕಲಿಯುವುದಕ್ಕೆ ಪ್ರೇರಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಅಂತರ್ಜಾಲದ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.ಡಾ. ರವೀಂದ್ರ, ಡಾ. ನಾಗಪ್ಪ ಹೂವಿನಭಾವಿ ಮಾತನಾಡಿದರು.
ಪಿಜಿ ಸೆಂಟರ್‌ನ ಆಡಳಿತಾಧಿಕಾರಿ ಕೆ.ಎಚ್.ಛತ್ರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಅಂಬಿಕಾ, ಮಹ್ಮದ ಮನ್ಸುರ್, ಮುತ್ತಪ್ಪ ದೇವರಮನಿ, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.