ಗೌರವ ಡಾಕ್ಟರೇಟ್ ಪಡೆದ ಡಾ. ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿಯವರ ವ್ಯಕ್ತಿತ್ವ, ಸಾಧನೆ ಎಲ್ಲರಿಗೂ ಸ್ಪೂರ್ತಿ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿಯವರ ವ್ಯಕ್ತಿತ್ವ, ಸಾಧನೆ ಹಾಗೂ ಅವರು ಅನುಸರಿಸುತ್ತಿರುವ ಮೌಲ್ಯಗಳು ಎಲ್ಲರಿಗೂ ಆದರ್ಶ ಹಾಗೂ ಸ್ಪೂರ್ತಿಯಾಗಿವೆ ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಂ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ.ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಯಶಸ್ಸು ಒಂದು ದಿನದಲ್ಲಿ ದೊರೆಯುವಂತಾದ್ದಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಇದು ತ್ಯಾಗವನ್ನು ಬಯಸುತ್ತವೆ. ಸಮಾಜದಲ್ಲಿ ಎರಡು ರೀತಿಯ ಜನರನ್ನು ಕಾಣುತ್ತೇವೆ. ಒಂದು ವರ್ಗದ ಜನ ತಮಗಾಗಿ ಬದುಕುವವರು. ಮತ್ತೊಂದು ವರ್ಗ ಇತರರ ಬದುಕನ್ನು ಬದಲಾಯಿಸಲು, ಸುಧಾರಿಸಲು ಬದುಕುವವರು. ಡಾ.ಬಿ. ನಾಗನಗೌಡ ಹಾಗೂ ಡಾ.ವಸುಂಧರಾ ಭೂಪತಿಯವರು ಎರಡನೇ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಬಿ. ರವಿ ಮಾತನಾಡಿ, ಈ ಹಿಂದೆ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿನ ಕನ್ನಡ ವಿಭಾಗ ಮುಚ್ಚಿಹೋಗುವ ಹಂತದಲ್ಲಿತ್ತು. ಇದು ವಿದ್ಯಾರ್ಥಿಗಳ ಕೊರತೆಯಿಂದಲ್ಲ. ದಾಖಲಾತಿಗೆ ₹೨೨೮೦೦ ಫೀಜನ್ನು ಕಟ್ಟಬೇಕಿತ್ತು. ಈ ವಿಷಯವನ್ನು ಬಿ. ನಾಗನಗೌಡರ ಗಮನಕ್ಕೆ ತಂದಾಗ, ಕೂಡಲೇ ೧೧ ವಿದ್ಯಾರ್ಥಿಗಳ ಫೀಜನ್ನು ಕಟ್ಟುವುದರ ಮೂಲಕ ಕೇಂದ್ರದಲ್ಲಿ ಕನ್ನಡ ವಿಭಾಗ ಉಳಿಯಲು ಕಾರಣರಾದರು. ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಿಗೆ ಸಹಾಯ ಹಸ್ತ ಚಾಚಿದ್ದಾರೆ ಎಂದರು.
ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು, ಹೋಬಳಿ ಘಟಕದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಯವರು, ಹಿತೈಷಿಗಳು ಡಾ.ಬಿ. ನಾಗನಗೌಡ ಹಾಗೂ ಡಾ.ವಸುಂಧರಾ ಭೂಪತಿಯವರನ್ನು ಸನ್ಮಾನಿಸಿದರು. ಟಿ. ವೆಂಕಟೇಶ್ ಹಾಗೂ ತಬಲಾ ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನೀಡಿದರು. ಎಚ್.ಎನ್. ಭೋಸ್ಲೆ ಸ್ವಾಗತಿಸಿದರು. ಜಿ. ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ಜೆ. ಪುರುಷೋತ್ತಮ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸದಸ್ಯರು, ನೂರಾರು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.