ಕೊಪ್ಪಳ: ಅಮೆರಿಕನ್ ಸಾಮ್ರಾಜ್ಯವಾದಿ ಶಕ್ತಿಗಳ ಯುದ್ಧೋನ್ಮಾದಿ ದಾಳಿಗಳು ಇಂದು ಮಾನವೀಯ ಮೌಲ್ಯಗಳನ್ನೇ ತುಳಿಯುತ್ತಿರುವಂತಿವೆ ಎಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಜನವಸತಿ ಪ್ರದೇಶ,ಶಾಲೆ, ಆಸ್ಪತ್ರೆ ಮತ್ತು ಸಾಮಾನ್ಯ ನಾಗರಿಕರ ಬದುಕಿನ ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸುವುದು ಅತ್ಯಂತ ಅಮಾನವೀಯ ಮತ್ತು ಅನಾಗರಿಕ ಕೃತ್ಯವಾಗಿದೆ. ಯುದ್ಧಕ್ಕೂ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಮಾನವೀಯ ಮೌಲ್ಯಗಳು ಇರುವುದಾಗಿ ಹೇಳಲಾಗುತ್ತದೆ. ಆದರೆ, ಅವುಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ನಿರಪರಾಧಿ ನಾಗರಿಕರ ಮೇಲೆ ದಾಳಿ ನಡೆಸುವುದು ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋವಿಯತ್ ಒಕ್ಕೂಟದ ಪತನದ ನಂತರ ಅಮೆರಿಕ ಸಾಮ್ರಾಜ್ಯಶಾಹಿ ಧೋರಣೆ ಮುಂದುವರಿಸಿಕೊಂಡು ಹಲವಾರು ರಾಷ್ಟ್ರಗಳ ಸಾರ್ವಭೌಮತ್ವ ಕುಂಠಿತಗೊಳಿಸುವ ಪ್ರಯತ್ನ ಮಾಡುತ್ತಿದೆ. ವಿಶ್ವದ ಶಾಂತಿ ಬಯಸುವ ಭಾರತ ಇಂತಹ ಯುದ್ಧಕೋರ ರಾಷ್ಟ್ರಗಳ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ ಮಾತನಾಡಿ, ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಪ್ರಭುತ್ವ ಮತ್ತು ಆರ್ಥಿಕ ಸ್ವಾರ್ಥಕ್ಕಾಗಿ ಯುದ್ಧವನ್ನು ಸಾಧನವಾಗಿ ಬಳಸುತ್ತಿರುವುದು ಜಗತ್ತಿನ ಶಾಂತಿಗೆ ದೊಡ್ಡ ಧಕ್ಕೆಯಾಗಿದೆ. ಯುದ್ಧದ ದಾಳಿಗಳಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಅನೇಕ ಮಕ್ಕಳು ಅನಾಥರಾಗುತ್ತಾರೆ. ಮನೆಗಳು ಧ್ವಂಸವಾಗುತ್ತವೆ ಮತ್ತು ಸಮಾಜವೇ ಭಯ ಹಾಗೂ ಅಶಾಂತಿಯ ವಾತಾವರಣಕ್ಕೆ ತಳ್ಳಲ್ಪಡುತ್ತದೆ. ಆದ್ದರಿಂದ ಜಗತ್ತಿನ ಶಾಂತಿಪ್ರಿಯ ಜನತೆ ಯುದ್ಧೋನ್ಮಾದಿ ರಾಜಕೀಯದ ವಿರುದ್ಧ ಎಚ್ಚೆತ್ತುಕೊಂಡು ಯುದ್ಧ ಬೇಡ–ಶಾಂತಿ ಬೇಕು ಎಂಬ ಘೋಷಣೆಯೊಂದಿಗೆ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಸದಸ್ಯರಾದ ಗಂಗರಾಜ ಅಳ್ಳಳ್ಳಿ, ಶಾರದ ಗಡ್ಡಿ, ನಾಗರಾಜ್ ಹುಲಿಗಿ, ಸುರೇಶ್ ದಳಪತಿ, ಯಮನೂರ ಹರಿಜನ, ಕುಮಾರ್, ಮಂಜುನಾಥ ಬೀಸರಳ್ಳಿ, ಶಬ್ಬೀರ್, ಆನಂದ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.