ಕೊಪ್ಪಳ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತ ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.
ಪ್ರತಿಭಟನೆಯುದ್ದೇಶಿಸಿ ಮಾತನಾಡಿದ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ, “ವೃದ್ಧರು, ವಿಧವೆಯರು, ವಿಕಲಚೇತನರು ಸೇರಿದಂತೆ ದುರ್ಬಲ ವರ್ಗದ ಜನರಿಗೆ ಪಿಂಚಣಿಯೇ ಬದುಕಿನ ಪ್ರಮುಖ ಆಸರೆ. ಇಂತಹ ಫಲಾನುಭವಿಗಳ ಪಿಂಚಣಿಯನ್ನು ಹಲವು ತಿಂಗಳಿಂದ ಸ್ಥಗಿತಗೊಳಿಸಿರುವುದು ಖಂಡನೀಯ. ಪರಿಶೀಲನೆ ಮತ್ತು ದಾಖಲೆಗಳ ನೆಪದಲ್ಲಿ ಅರ್ಹ ಫಲಾನುಭವಿಗಳನ್ನು ಕಚೇರಿಗಳಿಗೆ ಅಲೆದಾಡಿಸುವ ಬದಲು, ಅವರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಪಿಂಚಣಿ ಮರುಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.
ವೃದ್ಧರು, ವಿಧವೆಯರು, ವಿಕಲಚೇತನರು ಸೇರಿದಂತೆ ಹಲವಾರು ಫಲಾನುಭವಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ ಮೂಲಕ ಡಿಸಿಎಂ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಮಂಗಳೇಶ ರಾಠೋಡ್, ಹನುಮಂತ ಕಟಿಗಿ, ಪ್ರದೀಪ್, ದ್ಯಾಮಣ್ಣ ಡೊಳ್ಳಿನ, ಮದುಕಪ್ಪ, ಶ್ರೀಕಾಂತ್, ನಾಗಪ್ಪ, ಸತ್ಯಮ್ಮ, ಕರಿಯಪ್ಪ, ಸಂಜೀವಪ್ಪ, ವೆಂಕಟೇಶ, ಪಾತವ್ವ, ಕೆಂಚಮ್ಮ, ಗಂಗವ್ವ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಮತ್ತು ಫಲಾನುಭವಿಗಳಿದ್ದರು.