ಕಬ್ಬಿಗೆ ಬೆಂಕಿ: ತನಿಖೆಗೆ ಮುಂದಾದ ಸರ್ಕಾರ

KannadaprabhaNewsNetwork |  
Published : Nov 15, 2025, 02:45 AM IST
(ಫೋಟೊ 14ಬಿಕೆಟಿ1,(1) ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು) | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಿಡಿಗೇಡಿಗಳು ಕಬ್ಬು ತುಂಬಿದ ಟ್ರ್ಯಾಕ್ಟರ್‌ ಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಹಾನಿಯ ಸರ್ವೇ ಕಾರ್ಯ ಶುರು ಮಾಡುವುದರ ಜೊತೆಗೆ ಪ್ರಕರಣದ ಸೂಕ್ತ ತನಿಖೆಗೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಿಡಿಗೇಡಿಗಳು ಕಬ್ಬು ತುಂಬಿದ ಟ್ರ್ಯಾಕ್ಟರ್‌ ಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಹಾನಿಯ ಸರ್ವೇ ಕಾರ್ಯ ಶುರು ಮಾಡುವುದರ ಜೊತೆಗೆ ಪ್ರಕರಣದ ಸೂಕ್ತ ತನಿಖೆಗೆ ಮುಂದಾಗಿದೆ.

ಘಟನಾ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಉಸ್ತವಾರಿ ಸಚಿವ ಆರ್‌,ಬಿ. ತಿಮ್ಮಾಪೂರ, ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ಕಾನೂನು ಕ್ರಮಕ್ಕೆ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಮುಂದಾಗಿದ್ದಾರೆ.

ರಾಜ್ಯದ ಗಮನ ಸೆಳೆದಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳದ ರೈತರ ಹೋರಾಟ ಗುರುವಾರ ಸಂಜೆ ಹಿಂಸೆಗೆ ತಿರುಗಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ ಕಲ್ಲು ತೂರಾಟ ನಡೆಸಿದ್ದರಿಂದ ಹೆಚ್ಚುವರಿ ಎಎಸ್ಪಿ, ಇಬ್ಬರು ಕಾರ್ಖಾನೆ ಸಬ್ಬಂದಿ, ಕೆಲವು ರೈತರು ಗಾಯಗೊಂಡಿದ್ದರು.

ಆಘಾತಗೊಂಡಿರುವ ರೈತರು:

ಕಣ್ಣೆದುರೇ ಹೊತ್ತಿ ಉರಿಯುತ್ತಿರುವ ಕಬ್ಬಿನ ಟ್ರ್ಯಾಕ್ಟರ್ ಕಂಡು ಕಣ್ಣೀರಿಡುತ್ತಿರುವ ರೈತರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಹಾನಿಯ ಬಗ್ಗೆ ಪರಿಶೀಲನೆ ನಡೆಸಿರುವ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಇಷ್ಟೊಂದು ಪ್ರಮಾಣದಲ್ಲಿ ರೈತರು ರೊಚ್ಚಿಗೆಳಲು ಹೇಗೆ ಸಾಧ್ಯ ಎಂದು ಚಿಂತೆಗೀಡಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಅತ್ಯಂತ ಹಳೆಯ ಸಕ್ಕರೆ ಕಾರ್ಖಾನೆಯಿಂದೇ ಹೆಸರಾಗಿದ್ದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಗುರುವಾರ ಅಕ್ಷರಶಃ ರಣಾಂಗಣವಾಗಿತ್ತು, ರೈತರು ಕಬ್ಬಿಗೆ ಸೂಕ್ತ ಬೆಲೆ ಮತ್ತು ಬಾಕಿ ಬಿಲ್‌ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗೆ ನಡೆಸಿದ್ದರು. ಗುರುವಾರ ಸಮೀರವಾಡಿ ಸೋಮಯ್ಯ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಆರಂಭಿಸಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನೆಕಾರರು ಕಾರ್ಖಾನೆಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿ 25ಕ್ಕೂ ಅಧಿಕ ಕಬ್ಬು ತುಂಬಿದ ಟ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ್ದರು. ಪೆಟ್ರೋಲ್‌ ಸುರಿದು ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ಗಳು ಮತ್ತು ಐದಕ್ಕೂ ಅಧಿಕ ಬೈಕ್ ಗಳು ಬೆಂಕಿಗೆ ಆಹುತಿಯಾಗಿದ್ದವು. ಕಣ್ಣೆದುರೇ ಕಬ್ಬು ಭಸ್ಮವಾಗುತ್ತಿರುವ ದೃಶ್ಯ ಕಂಡು ರೈತರು ಕಣ್ಣೀರಿಡುತ್ತಿದ್ದ ದೃಶ್ಯ ಮನಕುಲುಕುವಂತಿತ್ತು. ಕಿಡಿಗೇಡಿಗಳು ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಗಿದ್ದನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ತನಿಖೆ ಮೂಲಕ ಪತ್ತೆಗೆ ಮುಂದಾಗಿದೆ.

ಎಲ್ಲೆಡೆ ಪೋಲಿಸ್‌ ಬಿಗಿ ಬಂದೋಬಸ್ತ್:

ಮುಧೋಳ ನಗರದಲ್ಲಿ ಹಾಗೂ ಸೈದಾಪುರದಲ್ಲಿ ನಡೆದ ಘಟನೆಯ ಪ್ರಯುಕ್ತ ಮುಂಜಾಗ್ರತೆ ಕ್ರಮವಾಗಿ 16 ಕೆಎಸ್ಆರ್ಪಿ ವಾಹನ, 28 ಡಿಎಆರ್ ವಾಹನ ಹಾಗೂ 1000ಕ್ಕೂ ಅಧಿಕ ಪೊಲೀಸ್‌ ಇಲಾಖೆಯ ಅಧಿಕಾರಿ, ಸಿಬ್ಬಂದಿ ನೇಮಕ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರೆತೆ ಕ್ರಮವಾಗಿ ಮೂರು ತಾಲೂಕಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೋಗೊಳ್ಳಲಾಗಿದೆ. ಮೊದಲು ಎಡಿಜಿಪಿ ಹಿತೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ನಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿ ಅನುಭವಿಸಿರುವ ರೈತರಿಂದ ಮಾಹಿತಿ ಪಡೆದುಕೊಂಡರು. ಇತ್ತ ಗುರುವಾರದ ಪ್ರಕರಣ ಸಂಬಂಧ ಪೊಲೀಸ್‌ ಇಲಾಖೆ 15 ಜನ ಶಂಕಿತರನ್ನು ಗುರುತಿಸಿದ್ದು, ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಘಟನೆಯಲ್ಲಿ ಉಂಟಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ ಪಟ್ಟಿ ಮಾಡುತ್ತಿದ್ದು, ಇದಕ್ಕೆ ಪರಿಹಾರ ಕೊಡಿಸಲು ಸರ್ಕಾರ ಮುಂದಾಗಿದೆ.

ಕಬ್ಬಿಗೆ ಸೂಕ್ತ ಬೆಲೆ ಒದಗಿಸಬೇಕು ಹಾಗೂ ಬಾಕಿ ಬಿಲ್‌ ವಿಚಾರವಾಗಿ ನಡೆದ ರೈತರ ಹೋರಾಟದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ನಿಜವಾದ ರೈತರು ಅಸಮಾಧಾನಗೊಂಡಿದ್ದು, ಸರ್ಕಾರ ಈ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.

ಬಾಗಲಕೋಟೆಯ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ50ಕ್ಕೂ ಅಧಿಕ ಕಬ್ಬಿನ ಟ್ರ್ಯಾಕ್ಟರ್‌ ಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ. ರೈತರ ಸೋಗಿನಲ್ಲಿ ಕೆಲವರು ಗಲಾಟೆ ನಡೆಸಿರುವುದು ಗೊತ್ತಾಗಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮೇಲ್ನೋಟಕ್ಕೆ ಇದು ಪ್ರೀ ಫ್ಲ್ಯಾನ್ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಕೃತ್ಯ ರೈತರು ಮಾಡಿದ್ದಲ್ಲ, ಕಿಡಿಕೇಡಿಗಳ ಕೃತ್ಯವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸುತ್ತೇವೆ.

- ಆರ್. ಹಿತೇಂದ್ರ ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ