ಕೋಲಾರ: ನಗರದ ಹೊರವಲಯ ಟಮಕದಲ್ಲಿ ಬುಧವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ಟಮಕಾ ಕೈಗಾರಿಕಾ ಪ್ರದೇಶ ರಾಷ್ಟ್ರೀಯ ಹೆದ್ದಾರಿ-೭೫ರ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಸೂಟ್ ಕೇಸ್‌ವೊಂದು ಜನರ ಆತಂಕಕ್ಕೆ ಕಾರಣವಾಗಿತ್ತು.
ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ, ಸೂಟ್‌ಕೇಸ್ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುವ ರೀತಿಯಲ್ಲಿತ್ತು, ಸೂಟ್‌ಕೇಸ್‌ನಲ್ಲಿ ಬೀಪ್ ಸೌಂಡ್ ಬರುತ್ತಿತ್ತು ಎಂಬ ಕಾರಣಕ್ಕೆ ಅದು ನೋಡುಗರಲ್ಲಿ ಆತಂಕಕ್ಕೂ ಕಾರಣವಾಗಿತ್ತು. ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಇನ್ಸ್ಪೆಕ್ಟರ್ ಸೇರಿ ಸುಮಾರು ಐದು ಜನ ತಜ್ಞರು ಸ್ಥಳಕ್ಕೆ ಬಂದು, ಬಾಂಬ್ ರಕ್ಷಾ ಕವಚ ಧರಿಸಿ ನಂತರ ತಮ್ಮಲ್ಲಿದ್ದ ಮೆಟಲ್ ಡಿಟೆಕ್ಟರ್, ಸ್ಕ್ಯಾನರ್ ಸೇರಿದಂತೆ ವಿವಿಧ ಉಪಕರಣಗಳನ್ನು ಬಳಸಿ ಮೊದಲು ಸೂಟ್‌ಕೇಸ್‌ನಲ್ಲಿ ಏನಿದೆ ಎಂಬುದನ್ನು ಪರಿಶೀಲನೆ ನಡೆಸಿದರು. ಸೂಟ್‌ಕೇಸ್‌ನಲ್ಲಿ ಯಾವುದೇ ಆತಂಕಕಾರಿ ವಸ್ತುಗಳು ಇಲ್ಲಾ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಎಸ್ಪಿ ಬಿ.ನಿಖಿಲ್ ಸೂಚನೆ ಮೇರೆಗೆ ಸೂಟ್‌ಕೇಸನ್ನು ಸಣ್ಣದಾದ ಡಿಟೋನೇಟರ್ ಬಳಸಿಕೊಂಡು ಬ್ಲಾಸ್ಟ್ ಮಾಡಲಾಯಿತು. ಈ ವೇಳೆ ಬ್ಲಾಸ್ಟ್ ಆದ ಸೂಟ್ ಕೇಸ್‌ನ ಅವಶೇಷಗಳನ್ನು ಪರಿಶೀಲನೆ ನಡೆಸಿ, ಸೂಟ್‌ಕೇಸ್ ನಲ್ಲಿ ಯಾವುದಾದರೂ ಸ್ಫೋಟಕ ಅಂಶ ಇದೆಯಾ? ಎಂಬುದನ್ನು ಕಂಡುಕೊಂಡರು. ಅದು ಕ್ರೌನ್ ಎಂಬ ಕಂಪನಿಯ ಬೆಲೆ ಬಾಳುವ ಸೂಟ್‌ಕೇಸ್ ಎಂಬುದಾಗಿ ತಿಳಿದಿದ್ದು, ಸ್ಮಾರ್ಟ್ ಸೂಟ್‌ಕೇಸ್ ಆಗಿದೆ, ಸೇಪ್ಟಿಗಾಗಿ ಅದಕ್ಕೆ ಸೆನ್ಸಾರ್ ಅಳವಡಿಸಲಾಗಿತ್ತು, ಸೂಟ್‌ಕೇಸ್ ತೆರೆಯಲು ನೀಡಲಾಗುವ ಪಾಸ್ವರ್ಡ್ ತಪ್ಪು ಹಾಕಿದಾಗ ಅದು ಬೀಪ್ ಬೀಪ್ ಎಂದು ಅಲರ್ಟ್ ಮಾಡುತ್ತಿತ್ತು ಎಂಬುದಾಗಿ ಕೋಲಾರ ಎಸ್ಪಿ ನಿಖಿಲ್ ಖಚಿತಪಡಿಸಿ ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿ ಜನರ ಆತಂಕ ದೂರ ಮಾಡಿದರು.