ಕೊಲ್ಲಮೊಗ್ರ ನೆರೆ ಸಂತ್ರಸ್ತರಿಗೆ 8 ವರ್ಷದಿಂದ ನಿವೇಶನ ಹಂಚಿಕೆ ಬಾಕಿ

KannadaprabhaNewsNetwork |  
Published : Sep 21, 2026, 02:45 AM IST
ನಿವೇಶನ* | Kannada Prabha

ಸಾರಾಂಶ

ಕೊಲ್ಲಮೊಗ್ರದಲ್ಲಿ‌ ನೆರೆಬಂದು ನಿವೇಶನ ಕಳೆದುಕೊಂಡವರಿಗೆ 8 ವರ್ಷ‌ ಕಳೆದರೂ ಇನ್ನೂ ನಿವೇಶನ ನೀಡದಿರುವ ಕುರಿತು ಕೆಡಿಪಿ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸಭೆಯ ಮುಂಭಾಗದಲ್ಲಿ ಧರಣಿ ನಡೆಸಿ ಶಾಸಕರು ಹಾಗೂ ತಹಸೀಲ್ದಾರ್ ಅವರ ಕೇಳಿಕೆ ಮೇರೆಗೆ ಸದಸ್ಯರು ಧರಣಿ ವಾಪಾಸು ಪಡೆದ ಘಟನೆ ಗುರುವಾರ ನಡೆದಿದೆ.

ಸುಳ್ಯ: ಕೊಲ್ಲಮೊಗ್ರದಲ್ಲಿ‌ ನೆರೆಬಂದು ನಿವೇಶನ ಕಳೆದುಕೊಂಡವರಿಗೆ 8 ವರ್ಷ‌ ಕಳೆದರೂ ಇನ್ನೂ ನಿವೇಶನ ನೀಡದಿರುವ ಕುರಿತು ಕೆಡಿಪಿ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸಭೆಯ ಮುಂಭಾಗದಲ್ಲಿ ಧರಣಿ ನಡೆಸಿ ಶಾಸಕರು ಹಾಗೂ ತಹಸೀಲ್ದಾರ್ ಅವರ ಕೇಳಿಕೆ ಮೇರೆಗೆ ಸದಸ್ಯರು ಧರಣಿ ವಾಪಾಸು ಪಡೆದ ಘಟನೆ ಗುರುವಾರ ನಡೆದಿದೆ.

ಸುಳ್ಯ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯು ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಸೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ, ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಜಯಪ್ರಕಾಶ್ ನೆಕ್ರೆಪ್ಪಾಡಿ, ಅಶ್ರಫ್ ಗುಂಡಿ, ಪರಮೇಶ್ವರ ಕೆಂಬಾರೆ, ತೀರ್ಥರಾಮ ಬಾಳಾಜೆ ಹಾಗೂ ಇಲಾಖಾಧಿಕಾರಿಗಳಿದ್ದರು.ಸಭೆಯಲ್ಲಿ ಪಾಲನಾ ವರದಿಯ ಮೇಲೆ ಮಾತನಾಡಿದ ಧರ್ಮಪಾಲ ಕೊಯಿಂಗಾಜೆ, ಕೊಲ್ಲಮೊಗ್ರದಲ್ಲಿ ನೆರೆ ಬಂದು 9 ಕುಟುಂಬಗಳಿಗೆ ಇನ್ನೂ ನಿವೇಶನ ಹಂಚಿಕೆ ಆಗಿಲ್ಲ. 8 ವರ್ಷ ಆಯಿತು. ಇಷ್ಟು ಸಮಯ ಬೇಕೆ ? ಎಂದರು.ಕಳೆದ ಕೆಡಿಪಿ ಸಭೆಯಲ್ಲಿ ನಾವು ಪ್ರಶ್ನಿಸಿದಾಗ ಮುಂದಿನ ಸಭೆಯೊಳಗೆ ಹಕ್ಕುಪತ್ರ ಕೊಡುವುದಾಗಿ ತಹಸೀಲ್ದಾರ್ ಹೇಳಿದ್ದರು. ಆದರೆ ಹಕ್ಕುಪತ್ರ ಕೊಟ್ಟಿಲ್ಲ. ಮತ್ತೆ ಪಾಲನಾ ವರದಿಯಲ್ಲಿ ಹಿಂದಿನಂತೆಯೇ ಬರೆಯಲಾಗಿದೆ ಎಂದು ಹೇಳಿದರಲ್ಲದೆ, ಸಭೆಯಲ್ಲಿ ಹೇಳಿದ್ದನ್ನು ಅಧಿಕಾರಿಗಳು ಮಾಡುವುದಿಲ್ಲವಾದರೆ ಸಭೆಗೆ ಬರುವುದು ಯಾಕೆ ಎಂದು ಹೇಳಿ ವೇದಿಕೆಯ ಮುಂಭಾಗಕ್ಕೆ ಬಂದು ನೆಲದಲ್ಲಿ ಕುಳಿತರು. ಧರ್ಮ ಪಾಲರ ಮಾತಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಧ್ವನಿಗೂಡಿಸಿದರು. ಕೆಡಿಪಿ ಸದಸ್ಯರಾದ ಪರಮೇಶ್ವರ್, ಅಶ್ರಫ್ ಗುಂಡಿ, ತೀರ್ಥರಾಮ, ಜಯಪ್ರಕಾಶ್ ಕೂಡಾ ಧರಣಿಯಲ್ಲಿ‌ ಭಾಗಿಯಾದರು. ಈ ವೇಳೆ ಸುಬ್ರಹ್ಮಣ್ಯ ರೇಂಜರ್ ಚೇತನ್ ರವರು, ‘ಜಂಟಿ ಸರ್ವೆ ಮಾಡಲಾಗಿದ್ದು ಜಂಟಿ ಸರ್ವೆ ವರದಿ ಹಾಗೂ ನಕಾಶೆ ಅರಣ್ಯ ಇಲಾಖೆ ಕಾರ್ಯ ಯೋಜನೆ ಮತ್ತು ಮೋಜಣಿ ವಿಭಾಗ ಶಿವಮೊಗ್ಗ ಇವರು ನೀಡಬೇಕಾಗಿದೆ’ ಎಂದು ಹೇಳಿದರು. ‘ಕಳೆದ ಸಭೆಯಲ್ಲಿ ಹಕ್ಕುಪತ್ರ‌ ನೀಡುತ್ತೇವೆ ಎಂದು ನಾವು ಹೇಳಿಲ್ಲ. ಜಂಟಿ ಸರ್ವೆ ವರದಿ ಅರಣ್ಯದಿಂದ ಸಿಗದೇ ಏನೂ ಮಾಡಲು ಸಾಧ್ಯ ಇಲ್ಲ. ಮತ್ತು ಆರ್.ಟಿ.ಸಿ. ತಿದ್ದುಪಡಿ ನಮ್ಮ ಹಂತದಲ್ಲಿ ಆಗುವುದಿಲ್ಲ’ ಎಂದು ಹೇಳಿದರು. ಶಾಸಕಿ‌ ಭಾಗೀರಥಿಯವರು, ‘ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಮತ್ತು ಸರ್ಕಾರದ ಹಂತದಲ್ಲಿ ಈ ಕೆಲಸ ಆಗಬೇಕಾಗಿದೆ. ಈಗ ಗಡಿ ಗುರುತು ಆಗಿದ್ದು ಆದಷ್ಟು ಬೇಗ ಇದನ್ನು ಮಾಡಿಕೊಡಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು. ‘ಇಷ್ಟು ವರ್ಷ ಬೇಕೆ?’ ಎಂದು ಕೆಡಿಪಿ ಸದಸ್ಯರು ಪ್ರಶ್ನಿಸಿದಾಗ, ‘ಈ ವಿಷಯವನ್ನು ಮೇಲೆ ಕುಳಿತು ಚರ್ಚೆ ಮಾಡೋಣ. ಸರ್ಕಾರದ ಹಂತದಲ್ಲಿ ಆಗಬೇಕಾದ ಕೆಲಸ ಆಗಿರುವುದರಿಂದ ಈಗ ನಿಮ್ಮದೇ ಸರ್ಕಾರ ಇದೆಯಲ್ಲವೇ’ ಎಂದು ಶಾಸಕರು ಹೇಳಿದರು. ‘ನೀವು ಸರ್ಕಾರವನ್ನು ದೂರಬೇಡಿ. ಅಧಿಕಾರಿಗಳು ಕೆಲಸ ಮಾಡಬೇಕು. ಮತ್ತು ನೀವು ಸರ್ಕಾರದ ಪ್ರತಿನಿಧಿ ನೀವು ಮಾಡಿಸಬೇಕು’ ಎಂದು ಶಾಹುಲ್ ಹಮೀದ್, ಪರಮೇಶ್ವರ ಕೆಂಬಾರೆ ಹೇಳಿದರು. ಈ ಕುರಿತು ಕೆಲ ಸಮಯ ಚರ್ಚೆ ನಡೆಯಿತು. ‘ನಾವು ಶಿವಮೊಗ್ಗದಿಂದ 1 ತಿಂಗಳೊಳಗೆ ವರದಿ ತರಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ’ ಎಂದು ರೇಂಜರ್ ಚೇತನ್ ಹೇಳಿದರೆ, ‘ಅರಣ್ಯದ ವರದಿ ಬಂದ ಮೇಲಷ್ಟೆ ಮುಂದುವರಿಯಲು ಸಾಧ್ಯ’ ಎಂದು ತಹಸೀಲ್ದಾರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಿಂದ ಪರಾರಿಯಾಗಿದ್ದ ಹಂತಕ 12 ವರ್ಷ ಬಳಿಕ ಅರೆಸ್ಟ್‌
ಕನಸು ಅರ್ಥೈಸಿಕೊಂಡು ಮುನ್ನಡೆದರೆ ಬದುಕು ಗೆದ್ದಂತೆ