ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಜೆಪಿಗೆ ನಾನು ಬದ್ಧತೆ ಇರುವ ಬಗ್ಗೆ ಪತ್ರ ಬರೆದು ಕೊಟ್ಟಿದ್ದೇನೆ. ಬಿಜೆಪಿಗೆ ಬೆಂಬಲ ನೀಡಿರುವ ನಿಲುವಿಗೆ ಬದ್ಧವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಭಿಮಾನ ಇದೆ. ದೇಶದ ಅಭಿವೃದ್ಧಿಗೆ ಮೋದಿ ಅವರ ನಾಯಕತ್ವವೇ ಸರಿಯಾಗಿದೆ. ಮಂಡ್ಯ ಜಿಲ್ಲೆಯ ಹೊಸ ಅಧ್ಯಕ್ಷರು ತಮ್ಮನ್ನು ಭೇಟಿಯಾಗಿದ್ದು, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಅಲ್ಲದೇ, ಜಿಲ್ಲೆಯಲ್ಲಿ ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದರು. ಹಾಲಿ ಸಂಸದರು ಎಂಬ ಸ್ಥಾನಮಾನ ಇದೆ. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದು ವಾಡಿಕೆ. ಮೊದಲ ಬಾರಿಗೆ ಮಂಡ್ಯದಲ್ಲಿ ಹೆಚ್ಚು ಮತಗಳು ಲಭಿಸಿವೆ. ಮಂಡ್ಯದಲ್ಲಿ ಬಿಜೆಪಿಯನ್ನು ಉಳಿಸಬೇಕಾಗಿದ್ದು, ನಾವು ಗೆಲುವು ಸಾಧಿಸುತ್ತೇವೆ. ನಾನೇನು ದೊಡ್ಡ ನಾಯಕಿ ಎಂದು ಹೇಳುತ್ತಿಲ್ಲ. ನನಗಿಂತ ದೊಡ್ಡವರಿದ್ದಾರೆ. ಆದರೆ ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ನನ್ನ ಜತೆ ನನ್ನ ಅಭಿಮಾನಿಗಳು ಮತ್ತು ಮಂಡ್ಯದ ಜನತೆ ಇದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.ಕಾಂಗ್ರೆಸ್‌ನಿಂದ ಆಹ್ವಾನ ಬಂದಿದೆ:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಅದೊಂದು ಸೌಹಾರ್ದಯುತ ಭೇಟಿಯಾಗಲಿದ್ದು, ಅದನ್ನು ಗೌರವಿಸುತ್ತೇನೆ. ಇನ್ನು, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ. ಯಾವುದೇ ಕಾರಣಕ್ಕೂ ಅಧಿಕೃತವಾಗಿ ಬಿಜೆಪಿಯಿಂದ ಯಾವುದೇ ಸೂಚನೆ ಇಲ್ಲ. ಜೆಡಿಎಸ್‌ಗೂ ಯಾವುದೇ ನಿರ್ದೇಶನ ಇಲ್ಲ ಎಂದರು.
ಕೇಂದ್ರದ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲು ಸಮರ್ಪಕವಾಗಿ ಕೆಲಸ ಮಾಡಿದ್ದೇನೆ. ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ನನ್ನ ಬಗ್ಗೆ ಕಪ್ಪುಚುಕ್ಕೆ ಇಲ್ಲ. ಸಂಸತ್‌ನಲ್ಲಿ ಮಾತನಾಡಿರುವ ವಿಷಯಗಳಲ್ಲಿಯೂ ಸಮರ್ಥವಾಗಿ ನಿಭಾಯಿಸಿದ್ದೇನೆ. ಹೀಗಾಗಿ ಬಿಜೆಪಿಯೇ ಮಂಡ್ಯ ಜಿಲ್ಲೆಯ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಖಂಡಿತವಾಗಿಯೂ ಬಿಜೆಪಿ ನನಗೆ ಟಿಕೆಟ್ ನೀಡಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.