6ರಿಂದ 16 ವರ್ಷದವರಿಗೆ ‘ಸೃಜನಾತ್ಮಕ, ಕ್ರಿಯಾಶೀಲಾತ್ಮಕ ಕಾರ್ಯಕ್ರಮ’
ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ, ಮನಸ್ಸಿಗೆ ಮುದ ನೀಡಲು ಬೇಸಿಗೆ ಶಿಬಿರದಂತಹ ಚಟುವಟಿಕೆಗಳು ಅವಶ್ಯಕವಾಗಿದ್ದು, ಮಕ್ಕಳು ತಪ್ಪದೇ ಇಂತಹ ಶಿಬಿರಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು
ನಗರದ ಕಾಶಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಆಯೋಜಿಸಿದ್ದ 6 ರಿಂದ 16 ವರ್ಷದೊಳಗಿನ ಮಕ್ಕಳಿಗೆ ‘ಸೃಜನಾತ್ಮಕ ಮತ್ತು ಕ್ರಿಯಾಶೀಲಾತ್ಮಕ’ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳೊಳಗಿನ ಕಲೆ, ಪ್ರತಿಭೆ ಹೊರ ತರಲು ಈ ತರಹದ ಚಟುವಟಿಕೆಗಳು ಅವಶ್ಯಕವಾಗಿದ್ದು, ಅದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸರ್ಕಾರಿ ಶಾಲೆಗಳು ಅವಕಾಶ ನೀಡುತ್ತಿರುವುದು ಸಂತಸವಾಗಿದೆ. ಇಂತಹ ಶಿಬಿರಗಳು ಹೆಚ್ಚೆಚ್ಚು ಆಗಬೇಕು. ಅದಕ್ಕೆ ಸರ್ಕಾರದ ಮಟ್ಟದಲ್ಲಿ ನಾನು ಚರ್ಚೆ ಮಾಡಿ 15 ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡುತ್ತೇನೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಸಹ ಚರ್ಚೆ ಮಾಡಿ ಅದಕ್ಕೆ ಬೇಕಾದ ಸಹಕಾರ ಒದಗಿಸುತ್ತೇನೆ ಎಂದರು.
ಆಹಾರ ಸಲಹಾ ತಜ್ಞ ಎಚ್.ನೇತ್ರಾವತಿ ಮಾತನಾಡಿ, ಮಕ್ಕಳಿಗೆ ಆರೋಗ್ಯಕವಾರದ ಆಹಾರವನ್ನು ನೀಡಬೇಕು. ಹೊರಗಡೆ ಕರೆದ ಅಡುಗೆ ಎಣ್ಣೆಯ ಪದಾರ್ಥಗಳು ಹಾಗೂ ಪ್ಲಾಸ್ಟಿಕ್‌ನಲ್ಲಿ ಇಟ್ಟಿರುವ ಆಹಾರವನ್ನು ಸೇವಿಸುವುದು ಕಡಿಮೆ ಮಾಡಬೇಕು. ಇದರಿಂದ ಮಕ್ಕಳ ಆರೋಗ್ಯ ಹದಗೆಡುತ್ತದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಎಚ್.ಕೃಷ್ಣಪ್ಪ ಮಾತನಾಡಿ, ಮಕ್ಕಳ ಮನಸ್ಸು ಜಡವಾಗಿ ಇರಲು ಬಿಡಬಾರದು ಅವರನ್ನು ಸದಾ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಕ್ರಿಯಾಶೀಲರನ್ನಾಗಿ ಮಾಡಬೇಕು ಎಂದರು.
ತಹಸೀಲ್ದಾರ್ ಲಿಂಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಅಧಿಕಾರಿ ಶಶಿರೇಖಾ, ಮುಖ್ಯ ಶಿಕ್ಷಕ ಹಾಲ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ಶಾಲೆ ಸಿಬ್ಬಂದಿ ಹಾಗೂ ಪೋಷಕರು ಭಾಗಿಯಾಗಿದ್ದರು.