ಪ್ರಸಾದ್ ನಗರೆ
ಹೇಳಿಕೇಳಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕರಾವಳಿ ಪ್ರದೇಶ. ಇಲ್ಲಿ ಬೇಸಿಗೆಯಲ್ಲಿ ಸೂರ್ಯನ ತಾಪ ಹೆಚ್ಚಳ ಮತ್ತು ಸಮುದ್ರ ಸಮೀಪದಲ್ಲಿರುವುದರಿಂದ ಉಷ್ಣತೆಯ ಪರಿಣಾಮ ಅಧಿಕವಾಗಿರುತ್ತದೆ. ಈಗಲೇ ಉಷ್ಣಾಂಶ ಏರಿಕೆ ಆಗುತ್ತಿದ್ದು, ಜನರ ಬಾಯಲ್ಲಿ ಸೆಕೆ ಎನ್ನುವ ಶಬ್ದ ಮಾಮೂಲಿಯಾಗಿದೆ. ಈಗ ದಿನದ ಗರಿಷ್ಠ ಉಷ್ಣಾಂಶ 32°–35° ಸೆಲ್ಸಿಯಸ್ ನಡುವೆಯೇ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅತ್ಯಧಿಕ ಉಷ್ಣಾಂಶ: ಇನ್ನು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಲಿದೆ. ಪರಿಸರದ ವಿನಾಶ, ಅಗತ್ಯವಿಲ್ಲದ ಯೋಜನೆಗಳ ಜಾರಿ ಪರಿಣಾಮ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.ತಾಲೂಕಿನ ಕೆಲವು ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳು ಉಲ್ಬಣವಾಗಲಿದೆ. ಮಂಕಿಯ ಕಡೆಯಲ್ಲಿ, ಗ್ರಾಮೀಣ ಭಾಗದ ಮುಗ್ವಾ ಮೊದಲಾದ ಕಡೆಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ. ತೋಟಗಳಿಗೆ ನೀರನ್ನು ಹಾಕಲು ಮೇ ತಿಂಗಳಲ್ಲಿ ತೀರಾ ಕಷ್ಟ ಅನ್ನುವ ಪರಿಸ್ಥಿತಿ ತಲೆದೋರಿದ ನಿದರ್ಶನಗಳು ಸಾಕಷ್ಟಿದೆ. ಅಲ್ಲದೆ ಮನೆ ಮನೆಗೆ ನಳವನ್ನು ಸರ್ಕಾರ ಹಾಕಿದ್ದರೂ ಅದರಲ್ಲಿ ನೀರು ಬರುವುದಕ್ಕಿಂತ ಗಾಳಿ ಬರುವುದೇ ಹೆಚ್ಚಾಗಿರುತ್ತಿದೆ. ಅಲ್ಲದೆ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಹ ಆಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಆರಾಮವಾಗಿ ಫ್ಯಾನ್ ಹಾಕಿಕೊಂಡು ಕೂರುತ್ತೇವೆ ಅನ್ನಲು ಆಗದ ಸ್ಥಿತಿಯೂ ಇರುತ್ತದೆ.
ಜನರಿಗೆ ಸಲಹೆಗಳು: ಮಕ್ಕಳಿಗೆ ಇನ್ನೇನು ರಜಾ ಬರುವುದರಿಂದ ಅವರು ಬಿಸಿಲಿನಲ್ಲಿ ಹೆಚ್ಚು ಸಮಯ ಇರದಂತೆ ನೋಡಿಕೊಳ್ಳುವುದು.
ನಮ್ಮ ತೋಟಗಳಿಗೆ ಪ್ರತಿ ವರ್ಷವೂ ಮೇ ತಿಂಗಳಲ್ಲಿ ನೀರಿರುವುದಿಲ್ಲ. ಆದರೆ ಈ ವರ್ಷ ಸೆಕೆ ಈಗಲೇ ಹೆಚ್ಚು ಆಗುತ್ತಿರುವುದರಿಂದ ಏಪ್ರಿಲ್ ಅಂತ್ಯದ ಒಳಗೆ ನೀರಿನ ಸಮಸ್ಯೆ ಜೋರಾಗುವಂತೆ ಅನಿಸುತ್ತದೆ ಎಂದು ರೈತ ಗಣೇಶ ಹೇಳುತ್ತಾರೆ.