ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಹಾಗೂ ಕಾರ್ಯ ಕರ್ತರು ಕನ್ನಾಳೆ ಅವರನ್ನು ಕೂಡಲೇ ಸ್ಥಾನದಿಂದ ವಜಗೊಳಿಸುವಂತೆ ಒತ್ತಾಯಿಸಿದರು.
ಕನ್ನಾಳೆ ಬಂಧನವಾಗಿ ಒಂದು ವಾರ ಕಳೆದಿದ್ದರೂ ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸದಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಟೌನ್‌ಹಾಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಕೆಲಕಾಲ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಬಳಿಕ ಮಾನವ ಸರಪಳಿ ನಿರ್ಮಿಸಿ ರಾಜ್ಯಪಾಲರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ ತಡೆಯಿಂದ ಸಂಚಾರಕ್ಕೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ಎಬಿವಿಪಿ ತುಮಕೂರು ವಿಭಾಗ ಸಂಚಾಲಕ ಎಚ್.ಆರ್. ಗುರುಪ್ರಸಾದ್, ಬಸವರಾಜ್ ಕನ್ನಾಳೆ ಅವರನ್ನು ರಾಜ್ಯಪಾಲರೇ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅವರು ಬಂಧನಕ್ಕೊಳಗಾಗಿದ್ದರೂ ಸದಸ್ಯತ್ವದಿಂದ ವಜಾಗೊಳಿಸದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಹೇಳಿದರು. .
ಕನ್ನಾಳೆ ಅವರನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಲು ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ಬೀಗ ಹಾಕಿ ವಿಶ್ವವಿದ್ಯಾಲಯ ಬಂದ್‌ಗೆ ಕರೆ ನೀಡಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿತು.