ಅತಿಥಿ ಉಪನ್ಯಾಸಕರು ಆಯನೂರು ಮಂಜುನಾಥ್‌ಗೆ ಬೆಂಬಲ ನೀಡಲಿ: ಚನ್ನಬಸವನಗೌಡ ಪಾಟೀಲ

KannadaprabhaNewsNetwork |  
Published : Jun 02, 2024, 01:45 AM IST
1ಕೆಡಿವಿಜಿ2-ದಾವಣಗೆರೆಯಲ್ಲಿ ಶನಿವಾರ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸುದ್ದಿಗೋಷ್ಟಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಕರ್ನಾಟಕ ವಿಧಾನ ಪರಿಷತ್‌ನ ನೈರುತ್ಯ ಪದವೀಧರರ ಕ್ಷೇತ್ರ ಚುನಾವಣೆ ಅಭ್ಯರ್ಥಿ ಆಯನೂರು ಮಂಜುನಾಥ ಅವರಿಗೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ- ಕರ್ನಾಟಕ ಬೆಂಬಲ ಘೋಷಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕಿನ ಮತ ಕ್ಷೇತ್ರಗಳಲ್ಲಿ ಅತಿಥಿ ಉಪನ್ಯಾಸಕರು ಆಯನೂರು ಮಂಜುನಾಥ ಅವರಿಗೆ ಬೆಂಬಲಿಸಬೇಕು ಎಂದರು.

ಸೇವಾ ಭದ್ರತೆ ಸೇರಿದಂತೆ ಹಲವಾರು ವರ್ಷಗಳಿಂದ ಸಮಿತಿ ಹೋರಾಟ ನಡೆಸಿಕೊಂಡು ಬಂದಿದ್ದು, ನಮ್ಮ ಪ್ರತಿ ಹೋರಾಟದ ವೇಳೆಯೂ ನಮ್ಮೊಂದಿಗೆ ಸದನದ ಒಳಗೆ ಮತ್ತು ಹೊರಗೆ ಬೆಂಬಲ ನೀಡಿದವರು ಆಯನೂರು ಮಂಜುನಾಥ. ನಮ್ಮ ಅನೇಕ ನ್ಯಾಯಯುತ ಬೇಡಿಕೆಗಳು ಈಡೇರುವಲ್ಲೂ ಅವರ ಪಾತ್ರ ದೊಡ್ಡದಿದೆ. ನಮ್ಮ ಇನ್ನೂ ಅನೇಕ ಬೇಡಿಕೆ ಈಡೇರಿಸಲು ಇಂತಹ ಪ್ರತಿನಿಧಿಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

ಆಯನೂರು ಮಂಜುನಾಥ ಆಡಳಿತ ಪಕ್ಷವಿದ್ದರೂ ಸದನದ ಬಾವಿಗಿಳಿದು ಅತಿಥಿ ಉಪ್ಯಾಸಕರ ಪರ ಧ್ವನಿ ಎತ್ತಿದವರು. ಕೊರೋನಾ ಹಾವಳಿ ಸಂಕಷ್ಟದ ವೇಳೆ ಐದೂವರೆ ತಿಂಗಳ ವೇತನ ಕೊಡಿಸಿ ಸ್ಪಂದಿಸಿದ್ದರು. ಸತತ 2 ವರ್ಷ ಕೊರೋನಾ ಹಾವಳಿ ಅವಧಿಯಲ್ಲಿ ಆನ್‌ಲೈನ್ ಪಾಠ ಮಾಡಲು ಸರ್ಕಾರದ ಜೊತೆ ಮಾತನಾಡಿ, ಅವಕಾಶ ಕೊಡಿಸಿದ್ದರು. ಕೊರೋನಾ ಕಂಟಕ ಮುಗಿದ ನಂತರ ಶೇ.50 ಅತಿಥಿ ಉಪನ್ಯಾಸಕರನ್ನು ಮಾತ್ರ ಸರ್ಕಾರ ನೇಮಿಸಿದ್ದಾಗ ಅದನ್ನು ಪ್ರತಿಭಟಿಸಿ, ಶೇ.100 ಅಂದರೆ, ಈ ಹಿಂದೆ ಕೆಲಸ ಮಾಡಿದ್ದ ಎಲ್ಲ ಅತಿಥಿ ಉಪನ್ಯಾಸಕರಿಗೆ ಮತ್ತೆ ಕೆಲಸ ಕೊಡಿಸಿದ್ದರು. ಹೀಗೆ ಸದಾ ಅತಿಥಿ ಉಪನ್ಯಾಸಕರ ಪರ ಇರುವ ಆಯನೂರು ಮಂಜುನಾಥರ ಪರ ನಾವಿದ್ದು, ಬೆಂಬಲಿಸೋಣ ಎಂದು ತಿಳಿಸಿದರು.

ಕೇವಲ ಅತಿಥಿ ಉಪನ್ಯಾಸಕರ ವೇತನ ₹13,500 ಇದ್ದುದನ್ನು ₹32,000ಕ್ಕೆ ಹೆಚ್ಚಿಸಿದ್ದು, ಅತಿಥಿ ಗ್ರಂಥ ಪಾಲಕರು, ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರ ನೇಮಕಾತಿ ಮಾಡಿಸುವಲ್ಲೂ ಆಯನೂರು ಯಶಸ್ವಿಯಾಗಿದ್ದಾರೆ. ನೌಕರರು, ಶಿಕ್ಷಕರು, ಆರೋಗ್ಯ ಇಲಾಖೆ, ಎನ್ಎಚ್ಎಂ ನೌಕರರು, ಅರಣ್ಯ ಇಲಾಖೆ, ನಿವೃತ್ತ ನೌಕರರಿಗೆ ಆರೋಗ್ಯ ಭಾಗ್ಯ, ಪೌರ ಕಾರ್ಮಿಕರ ಸಮಸ್ಯೆ, ಒಪಿಎಸ್ ಮತ್ತು ಎನ್‌ಪಿಎಸ್‌, ಪೊಲೀಸ್ ಇಲಾಖೆಯಲ್ಲಿ ಔರಾದಕರ್‌ ವರದಿಯಿಂದ ಉಂಟಾದ ವೇತನ ಹಾಗೂ ಭತ್ಯೆ ತಾರತಮ್ಯದ ಹೀಗೆ ಹತ್ತು ಹಲವು ಸಮಸ್ಯೆ ಬಗ್ಗೆ ಸದನದೊಳಗೆ, ಹೊರಗೆ ಧ್ವನಿ ಎತ್ತಿ, ಆ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ಹೋರಾಟ ಮಾಡಿದವರು ಆಯನೂರು ಮಂಜುನಾಥ ಎಂದು ತಿಳಿಸಿದರು.

ಸಮಿತಿಯ ಪ್ರಕಾಶ ಪಾಟೀಲ, ಮಂಜು ಮಂಡೆಮ್ಮನವರ್ ಇತರರು ಇದ್ದರು.

PREV