ಹುಬ್ಬಳ್ಳಿ:
ಕೇಂದ್ರದಲ್ಲಿ ಸುಭದ್ರ ಹಾಗೂ ಸುಸ್ಥಿರ ಸರ್ಕಾರ ಬರಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ಹೆಚ್ಚು ಸೌಲಭ್ಯ ಬಿಜೆಪಿ ನೀಡಿದೆ. ಹೀಗಾಗಿ ಎಸ್ಟಿ ಸಮುದಾಯ ಬಿಜೆಪಿಗೆ ಬೆಂಬಲಿಸಬೇಕು ಎಂದು ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು,.ಇಲ್ಲಿಯ ಗೋಕುಲ್ ಗಾರ್ಡ್‌ನಲ್ಲಿ ಬಿಜೆಪಿ ವತಿಯಿಂದ ಶನಿವಾರ ನಡೆದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಭಾರತ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಸಾಧನೆ ಮಾಡಬೇಕಿದೆ. ಹೀಗಾಗಿ ರಾಜ್ಯದ 28 ಕ್ಷೇತ್ರಗಳ ಪರಿಶಿಷ್ಟ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಬೇಕು ಎಂದ ಅವರು, ನಮ್ಮ ಸಮುದಾಯ ಬಿಜೆಪಿಗೆ ಬೆಂಬಲ ಸೂಚಿಸಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಆಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಹು-ಧಾ ಮಹಾನಗರವನ್ನು ಸುಂದರವಾಗಿ ಅಭಿವೃದ್ಧಿ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವಿರತವಾಗಿ ಶ್ರಮಿಸಿದ್ದಾರೆ. ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎಲ್ಲ ಸಮುದಾಯದವರ ಬಗ್ಗೆ ಅವರಿಗೆ ಕಾಳಜಿ ಇದೆ. ಹಾಗಾಗಿ ಎಲ್ಲರೂ ಅವರನ್ನು ಗೆಲ್ಲಿಸಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ವಾಲ್ಮಿಕಿ ಸಮಾಜ ನಿರಂತರವಾಗಿ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದೆ. ಮೋದಿ ಕೂಡ ಸಮಾಜಕ್ಕೆ ಆಭಾರಿಯಾಗಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗಿದೆ. ಪರಿಶಿಷ್ಟ ಪಂಗಡದವರ ಬಡತನ ನೀಗಿಸಲು ಹತ್ತಾರು ಯೋಜನೆ ಜಾರಿಗೊಳಿಸಲಾಗಿದೆ. ಬಡ ಮತ್ತು ಕಡುಬಡ ವರ್ಗದ ಜೀವನ ಮಟ್ಟ ಸುಧಾರಿಸಿ ಅವರನ್ನು ಮಧ್ಯಮವರ್ಗಕ್ಕೆ ತರುವುದೇ ಮೋದಿ ಕನಸು. ಅದಕ್ಕಾಗಿ ಎಲ್ಲರೂ ಬಿಜೆಪಿಗೆ ಬೆಂಬಲಿಸಬೇಕು ಎಂದು ಕರೆ ನೀಡಿದರು.ಕಾಂಗ್ರೆಸ್ ಕೇವಲ ವೋಟ್‌ಬ್ಯಾಂಕ್ ಸಲುವಾಗಿ ಸಮುದಾಯವನ್ನು ಬಳಸಿಕೊಂಡಿದೆ. ಆದರೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ದೂರಿದ ಅವರು, ಭಾರತದಲ್ಲಿ ಜಾತಿ ನೋಡಿ ಗೌರವ ಕೊಡುವುದಿಲ್ಲ. ಬದಲಾಗಿ ವ್ಯಕ್ತಿಯ ಗುಣ ನೋಡಿ ಗೌರವ ನೀಡುತ್ತಾರೆ ಎಂಬುದನ್ನು ವಾಲ್ಮಿಕಿ ರಾಮಾಯಣದ ಮೂಲಕ ತಿಳಿಸಿಕೊಟ್ಟಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರೇ ನಮ್ಮ ಶಕ್ತಿ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಎಂದು ಖರ್ಗೆ ಅವರನ್ನು ಹೆಸರಿಸಿದಾಗ ಮಮತಾ ಬ್ಯಾನರ್ಜಿ ಸೇರಿ ಅನೇಕರು ವಿರೋಧಿಸಿದರು ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಾಂಗ್ರೆಸ್‌ನವರು ಇದುವರೆಗೂ ಕೇವಲ ಬಾಯಿ ಮಾತಿನಲ್ಲಿಯೇ ಹಿಂದುಳಿದವರು, ಶೋಷಿತರ ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ. ಆದರೆ, ಬಿಜೆಪಿ ಹೇಳಿದಂತೆ ನಡೆದುಕೊಂಡಿದೆ. ದುಡಿದು ತಿನ್ನುವ ಸಮುದಾಯದವರಿಗಾಗಿ ಅನುಕೂಲಕರ ಯೋಜನೆ ರೂಪಿಸಿದೆ. ಧಾರವಾಡದಲ್ಲಿ 1.5 ಎಕರೆ ಜಾಗದಲ್ಲಿ ಭವ್ಯ ವಾಲ್ಮಿಕಿ ಭವನ ನಿಮಿರ್ಸಲಾಗುತ್ತಿದೆ. ಹೀಗೆ ಅನೇಕ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಲಾಗಿದೆ ಎಂದರು.ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಹನಮಂತ ಬಂಗಾರು ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ನಾಗರಾಜ ಛಬ್ಬಿ, ಸೀಮಾ ಮಸೂತಿ, ಮೇಯರ್ ವೀಣಾ ಬರದ್ವಾಡ, ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ದತ್ತಮೂರ್ತಿ ಕುಲಕರ್ಣಿ, ಮಣಿಕಂಠ ಶ್ಯಾಗೋಟಿ, ಪುಂಡಲೀಕ ತಳವಾರ, ಮಂಜುಳಾ ಅಕ್ಕೂರ, ಅಶೋಕ ವಾಲ್ಮಿಕಿ, ಲಕ್ಷ್ಮಣ ಮ್ಯಾಗಿನಮನಿ, ರವಿ ಬೆಂತೂರ, ಲಿಂಗರಾಜ ಪಾಟೀಲ ಸೇರಿದಂತೆ ಇತರರು ಇದ್ದರು.ರಾಜಕೀಯ ಪುರ್ನಜನ್ಮ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಿದ್ದರೂ ವಾಲ್ಮೀಕಿ ಸಮುದಾಯದ ನಾಯಕ ರಾಜಕೀಯದಿಂದ ಮರೆಯಾಗಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತೆ ಲೋಕಸಭೆಗೆ ಸ್ಪರ್ಧಿಸಲು ನನ್ನನ್ನು ಹುರಿದುಂಬಿಸಿದರು. ಟಿಕೆಟ್ ಘೋಷಣೆಯಾಗುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ನನಗೆ ರಾಜಕೀಯ ಪುರ್ನಜನ್ಮ ನೀಡಿದರು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.