ಹಣ ಬಲ, ತೋಳ್ಬಲ ಮೀರಿ ಬಿಜೆಪಿಗೆ ಬೆಂಬಲ

KannadaprabhaNewsNetwork |  
Published : Jun 14, 2024, 01:09 AM IST
ಬೆಳಗಾವಿ ಲೋಕಸಭಾ ಸದಸ್ಯ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಹಣ ಬಲ, ತೋಳ್ಬಲ ಹಾಗೂ ಅಧಿಕಾರದ ಬಲ ಮೀರಿ ಬಿಜೆಪಿಗೆ ಅಭೂತಪೂರ್ವ ಗೆಲುವಾಗಿದೆ. ಇದು ಕ್ಷೇತ್ರದ ಜನತೆ ಗೆಲುವಾಗಿದೆ ಎಂದು ಬೆಳಗಾವಿ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಹಣ ಬಲ, ತೋಳ್ಬಲ ಹಾಗೂ ಅಧಿಕಾರದ ಬಲ ಮೀರಿ ಬಿಜೆಪಿಗೆ ಅಭೂತಪೂರ್ವ ಗೆಲುವಾಗಿದೆ. ಇದು ಕ್ಷೇತ್ರದ ಜನತೆ ಗೆಲುವಾಗಿದೆ ಎಂದು ಬೆಳಗಾವಿ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಬಲ ಮತ್ತು ಅಧಿಕಾರ ಬಲ ಮೀರಿ ಕ್ಷೇತ್ರದ ಮತದಾರರು ಈ ಮೂಲಕ ಉತ್ತಮ ಅಭ್ಯರ್ಥಿ, ಉತ್ತಮ ಪಕ್ಷ ಹಾಗೂ ರಾಷ್ಟ್ರೀಯ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಉತ್ತಮ ಮತಗಳು ಬಂದಿವೆ. ಹೆಚ್ಚಿನ ರೀತಿಯಲ್ಲಿ ಜನರು ಬೆಂಬಲಿಸಿದ್ದಾರೆ. ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ, ಗೌರವ ಕೊಟ್ಟಿದ್ದಾರೆ. ಕ್ಷೇತ್ರದ ಜನತೆಯ ಋಣ ಮರೆಯಲು ಸಾಧ್ಯವಿಲ್ಲ ಎಂದರು.ಕಾಂಗ್ರೆಸ್‌ ಅಭ್ಯರ್ಥಿ ತಾಯಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ಬಿಜೆಪಿಗೆ 50,529 ಮತಗಳ ಮುನ್ನಡೆ ಸಿಕ್ಕಿದೆ. ಲೋಕಸಭಾ ಚುನಾವಣೆಯಲ್ಲಿ ಮತದಾರು ಭಾಷಾತೀತವಾಗಿ ಮತ ಚಲಾಯಿಸಿ, ರಾಷ್ಟ್ರೀಯತೆಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಇದನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಮತ್ತೊಂದು ಅವಧಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಬೇಕು ಎಂಬುದು ಚುನಾವಣೆಯಲ್ಲಿ ವರ್ಕೌಟ್‌ ಆಗಿದೆ. ಅಲ್ಲದೇ, ನರೇಂದ್ರ ಮೋದಿ ಅವರ ಬಹಿರಂಗ ಚುನಾವಣಾ ಪ್ರಚಾರ ಗೇಮ್‌ ಚೇಂಜ್‌ ಆಗಿದೆ. ಅಲ್ಲದೇ, ದಿ.ಸುರೇಶ ಅಂಗಡಿ ಅವರ ಅಭಿವೃದ್ಧಿ ಕಾರ್ಯಗಳು ಕೂಡ ಬಿಜೆಪಿ ಗೆಲುವಿಗೆ ಪೂರಕವಾಗಿವೆ. ಬಿಜೆಪಿ ಗೆಲುವಿಗೆ ಪರೋಕ್ಷವಾಗಿಯೂ ಕೆಲವರು ಕೆಲಸ ಮಾಡಿದ್ದಾರೆ. ಒಳ ಹೊಡೆತವೂ ಬಹಳಷ್ಟಿದೆ ಎಂದು ಹೇಳಿದರು.ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿ, ಬೆಳಗಾವಿ- ಧಾರವಾಡ- ಹುಬ್ಬಳ್ಳಿ ತ್ರಿವಳಿ ನಗರಕ್ಕೆ ಪೂರಕವಾಗಿ ಕೆಲಸ ಮಾಡಲಾಗುವುದು. ಗುಜರಾತ ಮಾದರಿಯಂತೆ ಎಸ್‌ಐಆರ್‌ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕೈಗಾರಿಕೋದ್ಯಮ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದು. ಎಸ್‌ಐಆರ್‌ ಯೋಜನೆ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಐಟಿ ಉದ್ಯಮ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.ಮಹದಾಯಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13 ಟಿಎಂಸಿ ನೀರು ಹಂಚಿಕೆ ಮಾಡಿದೆ. ಈ ಯೋಜನೆಗೆ ಗೋವಾ ಸರ್ಕಾರ ತಗಾದೆ ತೆಗೆದಿದೆ. ಆದರೆ, ಈ ಯೋಜನೆ ರದ್ದುಗೊಳಿಸಬೇಕೆಂಬ ಹಕ್ಕು ಯಾರಿಗೂ ಇಲ್ಲ. ಮಹದಾಯಿ ಯೋಜನೆಗೆ ಪರಿಸರ, ಅರಣ್ಯ ಇಲಾಖೆ, ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಬೇಕಿದೆ. ಈ ಸಂಬಂಧ ಗೋವಾ ಮುಖ್ಯಮಂತ್ರಿ ಜೊತೆಗೆ ಮಾತುಕತೆ ಮಾಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಮಾಜಿ ವಕ್ತಾರ ಎಂ.ಬಿ.ಜಿರಲಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ಶಂಕರಗೌಡ ಪಾಟೀಲ, ಉಜ್ವಲಾ ಬಡವನಾಚೆ, ರಮೇಶ ದೇಶಪಾಂಡೆ, ಮುರಗೇಶಗೌಡ ಪಾಟೀಲ, ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಉಪಸ್ಥಿತರಿದ್ದರು.ಬೆಳಗಾವಿ ಮಾದರಿ ಕ್ಷೇತ್ರಕ್ಕೆ ಬದ್ಧ

ಬೆಳಗಾವಿ ಲೋಕಸಬಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಬೆಳಗಾವಿ ಸಮಗ್ರ ಅಭಿವೃದ್ಧಿಗೊಳಿಸಲಾಗುವುದು. ಅಲ್ಲದೇ, ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

-ಜಗದೀಶ ಶೆಟ್ಟರ್‌, ಸಂಸದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ