ಕನ್ನಡಪ್ರಭ ವಾರ್ತೆ ತುಮಕೂರು
ಶನಿವಾರ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಕುಣಿಗಲ್, ಶಿರಾ, ಪಾವಗಡ ತಾಲೂಕಿನ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇಕಡಾ 5ರಷ್ಟು ವಿಶೇಷ ಚೇತನರಿದ್ದು, ಸಾಮಾನ್ಯ ಜನರಿಗಿಂತ ಹೆಚ್ಚು ಪ್ರತಿಭೆ, ಬುದ್ದಿವಂತಿಕೆ ಹೊಂದಿದ್ದಾರೆ ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ. ಸ್ವಾವಲಂಬಿ ಬದುಕಿಗಾಗಿ ಅವರ ಉದ್ಯೋಗ ಕ್ಷೇತ್ರಗಳೂ ಬದಲಾಗುತ್ತಾ, ಹೊಸ ಅವಕಾಶಗಳೂ ದೊರೆಯುತ್ತಿವೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ವಿಕಲಚೇತನರಿಗಾಗಿ ಎಲ್ಲ ಇಲಾಖೆಗಳ ಅನುದಾನದಲ್ಲಿ ಶೇಕಡಾ 3 ರಷ್ಟು ಮೀಸಲಾತಿ ನೀಡಲಾಗುತ್ತದೆ. ಈ ಅನುದಾನವನ್ನು ಬಳಸಿಕೊಂಡು ವಿಕಲಚೇತನರಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ವಿವಿಧ ವಸತಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 10,000 ನಿವೇಶನಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ವಿಶೇಷಚೇತನರಿಗಾಗಿ ಶೇಕಡಾ 3ರಷ್ಟು ಮೀಸಲಾತಿ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಹತೆಗನುಗುಣವಾಗಿ ಲ್ಯಾಪ್‌ಟಾಪ್‌ಗಳನ್ನು ನೀಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಎಚ್.ಎ.ಎಲ್ ಪ್ರತಿನಿಧಿ ಪ್ರಧಾನ ವ್ಯವಸ್ಥಾಪಕ ಕೃಷ್ಣಪ್ಪ, ವಿಕಲಚೇತನ ಕಲ್ಯಾಣಾಧಿಕಾರಿ ಚಿದಾನಂದಮೂರ್ತಿ, ಮತ್ತಿತರ ಅಧಿಕಾರಿಗಳು ಇದ್ದರು.