ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶಿಗ್ಗಾಂವಿ ಸಂಗನಬಸವ ಸ್ವಾಮೀಜಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಸಾಥ್ ನೀಡಿ ರೈತರ ಹೋರಾಟ ಬೆಂಬಲಿಸಿದರು.
ಹಾವೇರಿ: ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶಿಗ್ಗಾಂವಿ ಸಂಗನಬಸವ ಸ್ವಾಮೀಜಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಸಾಥ್ ನೀಡಿ ರೈತರ ಹೋರಾಟ ಬೆಂಬಲಿಸಿದರು.
ಈ ವೇಳೆ ರೈತ ಸಂಘಟನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಎರಡು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ರೈತರ ಹಿತ ಕಾಪಾಡುವ ಜವಾಬ್ದಾರಿ ಇದ್ದಿದ್ದರೆ ಸಚಿವರಾಗಲಿ, ಶಾಸಕರಾಗಲಿ ಬಂದು ಸಮಸ್ಯೆ ಆಲಿಸಬಹುದಿತ್ತು. ಆದರೆ ದಪ್ಪ ಚರ್ಮದ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ಹೊರಹಾಕಿದರು.ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ಕೇಂದ್ರದ 2400 ರು. ರಾಜ್ಯದ ವಂತಿಕೆ 600 ಸೇರಿಸಿ ಒಟ್ಟು 3000 ರು. ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರೈತರಿಗೆ ಬೆಲೆ ನಿಗದಿ ಗ್ಯಾರಂಟಿ ಕೊಡಬೇಕು. ಶೀಘ್ರವೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನಕ್ಕೆ ತರಬೇಕು. ಅತಿವೃಷ್ಟಿಯಿಂದಾದ ರೈತರಿಗೆ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕಾಳುಕಡಿ ವ್ಯಾಪಾರಿ ಜಿ.ವಿ. ಮಹಾಂತಪ್ಪ, ಸಾಹಿತಿ ಕಲಾವಿದರ ಬಳಗದಿಂದ ಸತೀಶ ಕುಲಕರ್ಣಿ, ಪ್ರೇಮಾನಂದ ಲಕ್ಕಣ್ಣವರ, ಲಿಂಗರಾಜ ಕಮ್ಮಾರ, ಡಿವೈಎಫ್‌ಐನ ಬಸವರಾಜ ಪೂಜಾರ, ಎಸ್‌ಎಫ್‌ಐನ ಬಸವರಾಜ ಎಸ್. ಬೆಂಬಲ ಸೂಚಿಸಿ ಮಾತನಾಡಿದರು. ರೈತ ಮುಖಂಡರಾದ ಮಾಲತೇಶ ಪೂಜಾರ, ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಮರಿಗೌಡ್ರ ಪಾಟೀಲ, ಪ್ರಭುಗೌಡ ಪ್ಯಾಟಿ, ಚನ್ನಪ್ಪ ಮರಡೂರ, ಶಿವಯೋಗಿ ಹೊಸಗೌಡ್ರ, ರಾಜು ತರ್ಲಗಟ್ಟ, ಶಂಕ್ರಣ್ಣ ಶಿರಗಂಬಿ, ಅಡಿವೆಪ್ಪ ಆಲದಕಟ್ಟಿ, ರುದ್ರಗೌಡ ಕಾಡನಗೌಡ್ರ, ದಿಳ್ಳೆಪ್ಪ ಮಣ್ಣೂರ, ಮುತ್ತಪ್ಪ ಗುಡಗೇರಿ, ಸುರೇಶ ಮೈದೂರ, ಈರಣ್ಣ ಚಕ್ರಸಾಲಿ, ರುದ್ರಪ್ಪ ಅಣ್ಣಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವಲ್ಲಿ ಮತ್ತು 3000 ರು. ಬೆಲೆ ನಿಗದಿ ಮಾಡುವ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದನ್ನು ಕೈಬಿಡಬೇಕು. ಬೇಕಾದರೆ ಎರಡೂ ಪಕ್ಷದವರು ನಮ್ಮ ವೇದಿಕೆಗೆ ಬಂದು ಚರ್ಚೆ ಮಾಡಲಿ. ನಾವು ಅದಕ್ಕೆ ಪಂಥಾಹ್ವಾನ ನೀಡುತ್ತೇವೆ. ರಾಜ್ಯ ಸರ್ಕಾರ ಕೂಡ ಕುರ್ಚಿ ಆಸೆ ಬಿಟ್ಟು ರೈತರ ಸಮಸ್ಯೆ ಆಲಿಸಬೇಕು ರೈತಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ಮಾತನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಿದೆ. ಮಳೆ ಬಿಸಿಲೆನ್ನದೇ ಪ್ರತಿನಿತ್ಯ ಹೊಲದಲ್ಲಿ ಕೆಲಸ ಮಾಡುವ ರೈತರು ಬೆಳೆದ ಬೆಳೆಗೆ ಸರಿಯಾಗಿ ಬೆಂಬಲ ಬೆಲೆ ಸಿಗದೇ ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ. ಸರ್ಕಾರ ರೈತರನ್ನು ನಿರ್ಲಕ್ಷಿಸುವುದು ಸರಿಯಲ್ಲ. ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.