ಜನಸೇವೆ ಮಾಡುವ ರಾಜಕಾರಣಿಗಳನ್ನು ಬೆಂಬಲಿಸಿ: ಕೆ.ಬಿ.ಚಂದ್ರಶೇಖರ್

KannadaprabhaNewsNetwork |  
Published : Oct 14, 2024, 01:20 AM IST
೧೩ಕೆಎಂಎನ್‌ಡಿ-೩ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮದಲ್ಲಿ ಗ್ರಾಮದ ಭಜರಂಗಿ ಬಾಯ್ಸ್ ಯುವಕರ ಸಂಘದವರು ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿದರು. | Kannada Prabha

ಸಾರಾಂಶ

ಇಂದು ರಾಜಕಾರಣದಲ್ಲಿ ಅಪ್ರಾಮಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹಣ ಬಲದ ಮೂಲಕ ಕಳ್ಳರು, ನಾಟಕ ಮಾಡುವವರು ಮತ್ತು ಡ್ಯಾನ್ಸ್ ಮಾಡಿ ಜನರನ್ನು ಮರಳು ಮಾಡುವವರು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಹುಸಿ ಸಮಾಜ ಸೇವೆಯ ಹೆಸರಿನಲ್ಲಿ ಹಣ ಹಂಚಿಕೆ ಮಾಡುತ್ತಾ ಯುವಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಾಮಾಣಿಕವಾಗಿ ಜನಸೇವೆ ಮಾಡುವ ರಾಜಕಾರಣಿಗಳನ್ನು ಜನರು ಬೆಂಬಲಿಸುವ ಮೂಲಕ ಜನಸೇವಕರಿಗೆ ಶಕ್ತಿ ತುಂಬುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಲಹೆ ನೀಡಿದರು.

ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮದಲ್ಲಿ ಗ್ರಾಮದ ಭಜರಂಗಿ ಬಾಯ್ಸ್ ಯುವಕ ಸಂಘದವರು ಪಿತೃಪಕ್ಷ ಹಾಗೂ ಆಯುಧ ಪೂಜೆ, ವಿಜಯದಶಮಿ ಮತ್ತು ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ರಾಜಕಾರಣದಲ್ಲಿ ಅಪ್ರಾಮಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹಣ ಬಲದ ಮೂಲಕ ಕಳ್ಳರು, ನಾಟಕ ಮಾಡುವವರು ಮತ್ತು ಡ್ಯಾನ್ಸ್ ಮಾಡಿ ಜನರನ್ನು ಮರಳು ಮಾಡುವವರು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಹುಸಿ ಸಮಾಜ ಸೇವೆಯ ಹೆಸರಿನಲ್ಲಿ ಹಣ ಹಂಚಿಕೆ ಮಾಡುತ್ತಾ ಯುವಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರಿಂದಾಗಿ ಅಭಿವೃದ್ಧಿ ರಾಜಕಾರಣ ಹಿಂದೆ ಸರಿದು ಹಣ ಹಂಚಿಕೆಯ ರಾಜಕಾರಣ ಮುಂಚೂಣಿಗೆ ಬಂದಿದೆ ಎಂದು ವಿಷಾದಿಸಿದರು.

ನಾನು ಕ್ಷೇತ್ರದ ಶಾಸಕನಾಗಿದ್ದಾಗ ವಿರೋಧ ಪಕ್ಷದ ಶಾಸಕನಾಗಿದ್ದರೂ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಮನವೊಲಿಸಿ ಸುಮಾರು ೨೫೦ ಕೋಟಿ ರು. ವೆಚ್ಚದಲ್ಲಿ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳ ಅಧುನೀಕರಣ ಮಾಡಿಸಿದೆ. ನೂರಾರು ಕೋಟಿ ರು. ವೆಚ್ಚದಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮಾಡಿಸಿದ್ದೆ. ತಾಲೂಕಿನ ಉಯ್ಗೋನಹಳ್ಳಿ ಬಳಿ ೨೨೦ ಕೆ.ವಿ ವಿದ್ಯುತ್ ವಿತರಣಾ ಘಟಕ ಸ್ಥಾಪಿಸಿದೆ. ಇದರ ಪರಿಣಾಮ ತಾಲೂಕಿನ ರೈತರಿಗೆ ವಿದ್ಯುತ್ ಸಮಸ್ಯೆ ಬಗೆಹರಿದಿದೆ.

ಪಟ್ಟಣದ ಬಸ್ ಡಿಪೋ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹತ್ತಾರು ಶಿಕ್ಷಣ ಸಂಸ್ತೆಗಳು ನನ್ನ ಅಧಿಕಾರದ ಅವಧಿಯಲ್ಲಿ ತಾಲೂಕಿಗೆ ಬಂದವು. ಆದರೆ, ನನ್ನ ನಂತರ ಅಧಿಕಾರಕ್ಕೆ ಬಂದ ರಾಜಕಾರಣಿಗಳು ಅಭಿವೃದ್ಧಿಯ ಹೆಸರಿನಲ್ಲಿ ಹೊಸಹೊಳಲು ಕೆರೆ, ಪಟ್ಟಣದ ಸ್ಟೇಡಿಯಂ ಮುಂತಾದವುಗಳನ್ನು ಹಾಳು ಮಾಡಿ ಜನರಿಗೆ ನಿರುಪಯುಕ್ತಗೊಳಿಸಿದರು. ಯುವಕರು ಹಣ ಹಿಂದೆ ಹೋಗಬಾರದು. ಮತಕ್ಕಾಗಿ ಹಣ ಹಂಚುವವರನ್ನು ತಿರಸ್ಕರಿಸಿ ಪ್ರಾಮಾಣಿಕ ಜನಸೇವಕರಿಗೆ ಮಣೆ ಹಾಕುವಂತೆ ತಿಳಿಸಿದರು.

ವಕೀಲ ಚಟ್ಟಂಗೆರೆ ನಾಗೇಶ್, ಯುವ ಮುಖಂಡ ಅನಿಲ್ ಗೌಡ, ಹರಿಹರಪು ಶ್ರೀಧರ್ ಸೇರಿದಂತೆ ಗ್ರಾಮ ಮುಖಂಡರು ಮತ್ತು ಯುವಕ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ