ಕನ್ನಡಪ್ರಭ ವಾರ್ತೆ ನವದೆಹಲಿ
ಹಿಂದಿನ ಬಿಜೆಪಿ ಸರ್ಕಾರಾವಧಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ಮುಖಂಡರ ವಿರುದ್ಧದ ಕ್ರಿಮಿನಲ್ ವಿಚಾರಣೆ ಹಾಗೂ ಕರ್ನಾಟಕ ಹೈಕೋರ್ಟ್ ನೀಡಿದ್ದ 10,000 ರು. ದಂಡದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರಕ್ಕೂ ನೋಟಿಸ್ ಜಾರಿಮಾಡಿರುವ ಕೋರ್ಟ್, ಆರು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.
2022ರಲ್ಲಿ ಗುತ್ತಿಗೆದಾರನೊಬ್ಬನ ಆತ್ಮಹತ್ಯೆಗೆ ಸಂಬಂಧಿಸಿ ಆಗಿನ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಅಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಮನೆವರೆಗೆ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಎಂ.ಬಿ.ಪಾಟೀಲ್, ರಾಮಲಿಂಗಾ ರೆಡ್ಡಿ ಮತ್ತಿತರ ನಾಯಕರು ಪಾದಯಾತ್ರೆ ಮಾಡಿದ್ದರು.
ಈ ಸಂಬಂಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸಿದ್ದರಾಮಯ್ಯ ಮತ್ತಿತರರಿಗೆ 10 ಸಾವಿರ ರು. ದಂಡ ವಿಧಿಸಿತ್ತು. ಜತೆಗೆ, ಈ ಪ್ರಕರಣದ ಸಂಬಂಧ ಮಾ.6ರೊಳಗೆ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿತ್ತು.
ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ಪಿ.ಕೆ.ಮಿಶ್ರಾ ಅವರಿದ್ದ ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು.
ರಾಜಕಾರಣಿಗಳಿಗೆ ಬೇರೆನಾ?
ವಿಚಾರಣೆ ವೇಳೆ ಸಿದ್ದರಾಮಯ್ಯ ಅವರ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಅದೊಂದು ರಾಜಕೀಯ ಪ್ರತಿಭಟನೆ. ಅದು ಶಾಂತಿಯುತವಾಗಿ ನಡೆದಿದೆ.
ಅದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದರು.ರಸ್ತೆಗಳಲ್ಲಿ ನಡೆಯುವ ಪ್ರತಿ ಸಾರ್ವಜನಿಕ ಪ್ರತಿಭಟನೆ ಕೂಡ ಸಾಮಾನ್ಯ ಜೀವನಕ್ಕೆ ಅಡ್ಡಿಪಡಿಸುತ್ತದೆ.
ಆದರೂ ಅದಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಸಿಂಘ್ವಿ ಉದಾಹರಣೆ ಸಹಿತ ವಾದ ಮಂಡಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ನ್ಯಾ.ಮಿಶ್ರಾ, ನೀವು ಈತನಕ ಉದಾಹರಿಸಿದ ಎಲ್ಲಾ ಪ್ರಕರಣಗಳು ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ್ದೇ ಆಗಿದೆ.
ರಾಜಕಾರಣಿಯೊಬ್ಬರು ಪ್ರತಿಭಟನೆ ಮಾಡಿದರೆ ಅದಕ್ಕೆ ಅವಕಾಶ ನೀಡಬೇಕು, ಆದರೆ ಸಾಮಾನ್ಯ ನಾಗರಿಕರು ಮಾತ್ರ ಹಾಗೆ ಮಾಡಬಾರದು ಅಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.
ಜತೆಗೆ, ರಾಜಕಾರಣಿಯೊಬ್ಬರು ಪ್ರತಿಭಟನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ಪ್ರಕರಣ ಯಾಕೆ ರದ್ದುಗೊಳಿಸಬೇಕು ಎಂದು ಮತ್ತೊಮ್ಮೆ ಪ್ರಶ್ನಿಸಿದರು.ನೀವು ಪ್ರತಿಭಟನೆಗೆ ಅನುಮತಿ ಪಡೆದಿಲ್ಲ.
ಬೆಳಗ್ಗೆ ಎದ್ದು ಬಂದು ಸಾವಿರಾರು ಮಂದಿ ಸೇರಿ ನಮಗೇನೂ ಆಗುವುದಿಲ್ಲ ಎಂದು ಪ್ರತಿಭಟನೆ ಮಾಡುತ್ತೀರಿ ಎಂದು ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.