ಬಳ್ಳಾರಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಕರಣವನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಮಾತನಾಡಿ, ಶೂ ಎಸೆತ ಪ್ರಕರಣ ಸಂವಿಧಾನದ ಮೇಲೆ ಹಾಗೂ ದೇಶದ ಅಖಂಡಂತೆಯ ಮೇಲೆ ನಡೆದ ದಾಳಿಯಾಗಿದೆ. ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಉನ್ನತ ತನಿಖೆ ಕೈಗೊಂಡು ಘಟನೆಯ ಹಿಂದಿರುವ ದ್ರೋಹಿಗಳನ್ನು ಸಹ ಬಂಧಿಸಬೇಕು ಎಂದು ಒತ್ತಾಯಿಸಿದರು.
ಮೋತಿ ವೃತ್ತದಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಕಳುಹಿಸಿದರು. ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಮನವಿ ಸ್ವೀಕರಿಸಿದರು. ಶೋಷಿತ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಪಿ.ಎಲ್. ಗಾದಿಲಿಂಗನಗೌಡ, ವಾಲ್ಮೀಕಿ ಸಮಾಜದ ಮುಖಂಡ ವಿ.ಎಸ್. ಶಿವಶಂಕರ್, ಛಲವಾದಿ ಮಹಾಸಭಾದ ಮುಖಂಡ ನರಸಪ್ಪ, ಜಿಲ್ಲಾ ಬಂಜಾರ ಸಮುದಾಯದ ಅಧ್ಯಕ್ಷ ರಾಮಾನಾಯ್ಕ, ಎಂ.ಕೆ. ಗೋವಿಂದಬಾಬು, ಉಪನ್ಯಾಸಕ ಡಾ.ಟಿ.ದುರುಗಪ್ಪ, ಸಿದ್ದೇಶ್, ಎಚ್.ಬಿ. ಗಂಗಪ್ಪ, ಕೆ.ದೇವದಾಸ್, ಎಚ್.ಆಂಜಿನೇಯ, ಬೆಳಗಲ್ಲು ಹುಲುಗಪ್ಪ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಅಂಬೇಡ್ಕರ್ ಸಂಘ ಪ್ರತಿಭಟನೆ: ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದಿರುವ ವಕೀಲನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಕೆ.ಅನಂತಕುಮಾರ್, ಮುಖಂಡರಾದ ರಾಜೇಶ್, ಮಲ್ಲೇಶ್ವರಿ, ಕೆ.ಹುಲಿಯಪ್ಪ, ಗಾದಿಲಿಂಗಪ್ಪ, ಜಿ.ನಾಗಪ್ಪ ಸೇರಿದಂತೆ ಸಂಘದ ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.