ಕನ್ನಡದ ಕವಿಯನ್ನು ಹೊತ್ತು ನಟನದ ರಜಾಮಜಾ ಉದ್ಘಾಟನೆ

KannadaprabhaNewsNetwork | Published : Apr 13, 2024 1:07 AM

ಸಾರಾಂಶ

ನಟನಕ್ಕೆ ಇದು ಇಪ್ಪತ್ತೆರಡನೇ ರಜಾ ಮಜಾ! ಪ್ರತಿ ವರ್ಷ, ಬರಗಾಲದಂತ ಬೇಸಿಗೆಯಲ್ಲೂ ನೂರಾರು ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಪೋಷಕರು ಮತ್ತು ಮಕ್ಕಳ ಜೊತೆ ಆಟ ಕಟ್ಟಿದ ನಟ ಅರುಣ್ ಸಾಗರ್‌, ನಟನ ನೆಲದ ಮೇಲೆ ಕಟ್ಟಿರುವ ಶಾಲೆಯಲ್ಲ, ನೆಲೆಯ ಮೇಲೆ ಕಟ್ಟಿರುವ ಶಾಲೆ. ಈ ನಟನ ಕನಸನ್ನು ತತ್‌ಕ್ಷಣ ನನಸಾಗಿಸಿದ ರೂಪಕ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ದಟ್ಟಗಳ್ಳಿಯ ಸುಪ್ರಿಂ ಪಬ್ಲಿಕ್‌ ಶಾಲೆಯಲ್ಲಿ ನಟನದ ರಜಾಮಜಾ ಉದ್ಘಾಟನೆ ಸರಳವಾಗಿ ನೆರವೇರಿತು.

ನಟನಕ್ಕೆ ಇದು ಇಪ್ಪತ್ತೆರಡನೇ ರಜಾ ಮಜಾ! ಪ್ರತಿ ವರ್ಷ, ಬರಗಾಲದಂತ ಬೇಸಿಗೆಯಲ್ಲೂ ನೂರಾರು ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಪೋಷಕರು ಮತ್ತು ಮಕ್ಕಳ ಜೊತೆ ಆಟ ಕಟ್ಟಿದ ನಟ ಅರುಣ್ ಸಾಗರ್‌, ನಟನ ನೆಲದ ಮೇಲೆ ಕಟ್ಟಿರುವ ಶಾಲೆಯಲ್ಲ, ನೆಲೆಯ ಮೇಲೆ ಕಟ್ಟಿರುವ ಶಾಲೆ. ಈ ನಟನ ಕನಸನ್ನು ತತ್‌ಕ್ಷಣ ನನಸಾಗಿಸಿದ ರೂಪಕ ಎಂದರು.

ಸುಚೇಂದ್ರ ಪ್ರಸಾದ್‌ ಮಾತನಾಡಿ, ರಜಾಮಜಾದಲ್ಲಿ ಸಾವಿರಾರು ಸೂಕ್ಷ್ಮ ಸಂಗತಿಗಳು ಜರಗುತ್ತದೆ. ಮಕ್ಕಳು ಎವೆ ಇಕ್ಕದೆ ನೋಡಬೇಕು ಎಂದರು.

ಗೀತ ರಚನೆಕಾರ ವಿ. ನಾಗೇಂದ್ರ ಪ್ರಸಾದ್‌ ಮಾತನಾಡಿ, ಇಷ್ಟು ವರ್ಷ ಈ ರಂಗ ಯಾನ ನಡೆಸಿದವರೇ ನಿಜವಾದ ಹೀರೋ ಎಂದರು.

ರವೀಂದ್ರ ಸ್ವಾಮಿ ಅವರು ಕತೆಯ ಮೊಲಕ ಮಕ್ಕಳನ್ನು ಸ್ವಾಗತಿಸಿದರು. ಇಂದ್ರ ನಾಯರ್‌ ಅವರು ಈ ರಂಗ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ನಟನದ ಪ್ರಾಂಶುಪಾಲ ಮೇಘಾ ಸಮೀರ. ಶಿಬಿರದ ವಿನ್ಯಾಸ, ಅದರ ವಿಸ್ತಾರ, ಮಕ್ಕಳಿಗೆ ರಂಗಪ್ರಜ್ಞೆಯ ಅವಶ್ಯಕತೆ, ಶಿಕ್ಷಣದಲ್ಲಿ ರಂಗದ ಅಡವಳಿಕೆಗಳ ಬಗ್ಗೆ ವಿವರಿಸಿದರು.

ನಟನದ ಸಂಸ್ಥಾಪಕ ಮಂಡ್ಯ ರಮೇಶ ಮಾತನಾಡಿ, ದಶಕಗಳ ಈ ರಂಗ ಸಾಹಸಕ್ಕೆ ಕನ್ನಡದ ಪೋಷಕರೇ ಪ್ರಧಾನ ಎಂದರು.

ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ ಇದ್ದರು.

ಕನ್ನಡದ ಮೊದಲ ಜ್ಞಾನಪೀಠ ಪುರಸ್ಕೃತ ಕುವೆಂಪು ಅವರನ್ನು ಶಿಬಿರದ ಮಕ್ಕಳು ಹೊತ್ತುತಂದು ರಂಗದ ಮೇಲೆ ಕೂರಿಸಿ, ಮಲ್ಲಿಗೆ ಮೊಗ್ಗಿನ ಹಾರ ಹಾಕಿ, ಕೆಂಪು, ಹಳದಿ ದಳಗಳನ್ನು ಚೆಲ್ಲಿ ಶಿಬಿರವನ್ನು ವಿಶೇಷವಾಗಿಸಿದರು.

ನಾಡಿನ ಹೆಮ್ಮೆಯ ಗೀತ ರಚನಾಕಾರ ವಿ. ನಾಗೆಂದ್ರ ಪ್ರಸಾದ್, ಹಿರಿಯ ನಟ ಮತ್ತು ವಾಗ್ಮಿ ಸುಚೇಂದ್ರ ಪ್ರಸಾದ್, ಖ್ಯಾತ ಕಲಾವಿದ ಅರುಣ್ ಸಾಗರ್, ಹೆಸರಾಂತ ರಂಗಕರ್ಮಿಗಳಾದ ಇಂದಿರಾ ನಾಯರ್, ಸುಪ್ರಿಂ ಪಬ್ಲಿಕ್ ಶಾಲೆಯ ಮುಖ್ಯಸ್ಥ ರವೀಂದ್ರ ಸ್ವಾಮಿ ಅವರನ್ನು ಅಭಿನಂದಿಸಲಾಯಿತು.

Share this article