ಹಾಸನ ಎಸ್ಪಿ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಏಕವಚನದಲ್ಲಿ ವಾಗ್ದಾಳಿ

KannadaprabhaNewsNetwork |  
Published : Mar 27, 2025, 01:08 AM ISTUpdated : Mar 27, 2025, 12:53 PM IST
26ಎಚ್ಎಸ್ಎನ್19 :  | Kannada Prabha

ಸಾರಾಂಶ

ನಾನೊಬ್ಬ ಎಂಎಲ್‌ಸಿ ಆಗಿ ಪೊಲೀಸ್ ಕಚೇರಿಗೆ ಖುದ್ದಾಗಿ ಹೋಗಿ ಎಸ್‌ಪಿಗೆ ದೂರು ಕೊಟ್ಟರೂ ಸ್ವೀಕರಿಸುವುದಿಲ್ಲ. ಒಂದು ದಿನವಾದರೂ ಎಫ್‌ಐಆರ್ ದಾಖಲಿಸುವುದಿಲ್ಲ. ನನಗೇ ಅನ್ಯಾಯವಾಗಿರುವಾಗ ಜಿಲ್ಲೆಯ ಜನರ ಕಥೆ ಏನು?  

  ಹಾಸನ : ನಾನೊಬ್ಬ ಎಂಎಲ್‌ಸಿ ಆಗಿ ಪೊಲೀಸ್ ಕಚೇರಿಗೆ ಖುದ್ದಾಗಿ ಹೋಗಿ ಎಸ್‌ಪಿಗೆ ದೂರು ಕೊಟ್ಟರೂ ಸ್ವೀಕರಿಸುವುದಿಲ್ಲ. ಒಂದು ದಿನವಾದರೂ ಎಫ್‌ಐಆರ್ ದಾಖಲಿಸುವುದಿಲ್ಲ. ನನಗೇ ಅನ್ಯಾಯವಾಗಿರುವಾಗ ಜಿಲ್ಲೆಯ ಜನರ ಕಥೆ ಏನು? ಇವತ್ತು ಪೊಲೀಸ್ ಇಲಾಖೆ ಉಳಿದೇ ಇಲ್ಲ. ಸರ್ಕಾರದ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಎಸ್‌ಪಿ ಮಹಮದ್ ಸುಜೀತಾ ಅವರ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಅವರು ಏಕವಚನದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಗೊರೂರು ಪ್ರವಾಸಿ ಮಂದಿರದಲ್ಲಿ ಬುಧವಾರ ನಗರಸಭೆಯ ಬಜೆಟ್ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯವೈಖರಿ ವಿರುದ್ಧ ಸಿಡಿಮಿಡಿಗೊಂಡ ಸೂರಜ್ ರೇವಣ್ಣ, ನಾನೊಬ್ಬ ಎಂಎಲ್‌ಸಿ ಆಗಿದ್ದು, ಹಾಸನ ಜಿಲ್ಲೆಯ ಎಸ್‌ಪಿ ಮಹಮದ್ ಸುಜೀತಾ ಅವರು ಸೇರಿ ಜಿಲ್ಲೆಯಲ್ಲಿ ನ್ಯಾಯ ಒದಗಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ಷೇಪಿಸಿದರು. ಇಂತಹ ರಾಜಕೀಯ ತಂತ್ರಗಾರಿಕೆ ಮತ್ತು ವ್ಯವಸ್ಥೆಯ ದುರುಪಯೋಗದಿಂದ ಪೊಲೀಸ್‌ ಇಲಾಖೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹನಿಟ್ರ್ಯಾಪ್‌ ವಿಚಾರವಾಗಿ ಮಾತನಾಡಿ, ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದ ಅವರು, ಇಂತಹ ಕೆಟ್ಟ ವ್ಯವಸ್ಥೆಯಿಂದ ಕರ್ನಾಟಕಕ್ಕೆ ದುಸ್ಥಿತಿ ಬಂದಿದೆ. ಅವರವರ ಪಕ್ಷದವರೇ ಕಿತ್ತಾಡಿಕೊಳ್ಳುತ್ತಿದ್ದಾರೆ. ರಾಜಣ್ಣ ಅವರು ಯಾವ ಸಚಿವರನ್ನು ಭೇಟಿಯಾದರು ಎಂದು ಪ್ರಶ್ನಿಸಿದರು ಯಾವ ಹಿರಿಯ ಮುಖಂಡರನ್ನು ಭೇಟಿಯಾದರು ಎಂಬುದನ್ನು ಮಾಧ್ಯಮಗಳಲ್ಲಿ ತೋರಿಸುತ್ತಿದ್ದೀರಿ. ರಾಜಕಾರಣವನ್ನು ನೇರವಾಗಿ ಮಾಡಬೇಕು. ೪೮ ಮಂದಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನುತ್ತಾರೆ. ಇದೆಲ್ಲ ರಾಜಕೀಯದಲ್ಲಿ ಒಳ್ಳೆಯ ಸಂಪ್ರದಾಯವಲ್ಲ ಎಂದು ಬೇಸರ ವ್ಯಕ್ತಪಡಸಿದರು. ಇದರಿಂದ ಯಾರಿಗೇ ಆಗಲಿ ಕೆಟ್ಟ ಹೆಸರು ಬರಲಿದೆ. ರಾಜ್ಯಕ್ಕೂ ಕೆಟ್ಟ ಹೆಸರು ಬರಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಯಾರೋ ಒಬ್ಬರು ಸಿಎಂ ಆಗಲು ಹೀಗೆ ಮಾಡಿದ್ದಾರ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ಆದರೆ ಅವರ ಪಕ್ಷದಲ್ಲೇ ಅವರು, ಇವರು ಅಂತ ಆರೋಪ-ಪ್ರತ್ಯಾರೋಪ ನಡೆಯುತ್ತಿವೆ ಎಂದರು.

ಇದೇ ವೇಳೆ ಹಾಸನ ಜಿಪಂನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸೂರಜ್, ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಹಾಲಿ ಸಿಇಒ ಅವರು ಪ್ರತಿ ಕಾಮಗಾರಿಗೂ ಇಂತಿಷ್ಟು ಪರ್ಸಂಟೇಜ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ದೂರಿದರು. ಈ ಬಗ್ಗೆ ನಮ್ಮ ಜಿಲ್ಲೆಯ ಶಾಸಕರಾದ ಸಿಮೆಂಟ್ ಮಂಜು, ಎಚ್.ಕೆ.ಸುರೇಶ್, ಹೆಚ್.ಡಿ.ರೇವಣ್ಣ ಮೊದಲಾದವರು ಅಧಿವೇಶನದಲ್ಲೇ ಚರ್ಚೆ ಮಾಡಿದ್ದಾರೆ. ಜಿಪಂನಲ್ಲಿ ನರೇಗಾ ಸೇರಿದಂತೆ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

ಜಿಪಂ ಸಿಇಒ ವರ್ಗಾವಣೆ ಆಗಲಿ:

ಜಿಲ್ಲೆಯ ಗ್ರಾಪಂ, ತಾಪಂ ನಿಂದಲೂ ಅನೇಕ ಕಾಮಗಾರಿಗಳಿಗೆ ಪರ್ಸಂಟೇಜ್ ಕೊಡಬೇಕಿದೆ. ಈ ಬಗ್ಗೆ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಮಾಡುತ್ತೇನೆ. ಭ್ರಷ್ಟಾಚಾರ ಮಿತಿ ಮೀರಲು ಕಾರಣರಾಗಿರುವ ಸಿಇಒ ಅವರನ್ನು ವರ್ಗ ಮಾಡಬೇಕು ಎಂದು ಮನವಿ ಮಾಡಿದರು. ಕೇಂದ್ರ ಸರ್ಕಾರದ ಆರ್‌ಸಿಎಚ್ ಅನುದಾನದಡಿ ಜಿಲ್ಲೆಗೆ ಬಂದಿದ್ದ ೫ ಕೋಟಿ ಹಣ ವಿನಿಯೋಗದಲ್ಲೂ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಂಬಂಧಪಟ್ಟವರು ಶ್ವೇತಪತ್ರ ಹೊರಡಿಸಿ, ಲೆಕ್ಕಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಹಾಸನ ವಿವಿಯನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಹೋರಾಟ ಮಾಡುತ್ತಿದ್ದೇವೆ. ಬೇರೆ ಜಿಲ್ಲೆಗಳ ವಿವಿಗಳಿಗೆ ಹೋಲಿಸಿದರೆ ಆರ್ಥಿಕ ಸ್ಥಿತಿಗತಿ ಸೇರಿದಂತೆ ಎಲ್ಲ ರೀತಿಯಲ್ಲೂ ಹಾಸನ ವಿವಿ ಉತ್ತಮವಾಗಿದೆ. ಸರ್ಕಾರದಿಂದ ಅಲ್ಲದೆ ಆಂತರಿಕವಾಗಿ ವಾರ್ಷಿಕ ೧೦ ಕೋಟಿ ಆದಾಯ ಬರುತ್ತಿದೆ. ವಿವಿ ಉಳಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವರು ಹಾಗೂ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಎಲ್ಲರಿಂದಲೂ ನಮ್ಮ ಮನವಿಗೆ ಸ್ಪಂದನೆ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.

 ಹನಿಟ್ರ್ಯಾಪ್‌ನಂತ ಕೀಳುಮಟ್ಟದ ರಾಜಕಾರಣ ಮಾಡಬಾರದು: 

ರಾಜಕೀಯದಲ್ಲಿ ಪಾರದರ್ಶಕತೆ ಮತ್ತು ಅಭಿವೃದ್ಧಿಯ ಉದ್ದೇಶ ಇರಬೇಕೇ ಹೊರತು, ಕೀಳುಮಟ್ಟದ ತಂತ್ರಗಳಿಗೆ ಮೊರೆ ಹೋಗಬಾರದು ಎಂದರು. ನಾವು ಪಾರದರ್ಶಕವಾದ ರಾಜಕಾರಣ ಮಾಡಬೇಕು. ನಮ್ಮ ಜಿಲ್ಲೆ ತಾಲೂಕು ಮತ್ತು ರಾಜ್ಯವನ್ನು ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದಾಗಿರಬೇಕು. ಜನ ಏಕೆ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ ಇಂದು ರಾಜಕಾರಣದಲ್ಲಿ ಅವರವರ ವೈಯಕ್ತಿಕ ವಿಚಾರಗಳನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವುದು, ತಾವು ಸಿಎಂ ಆಗಲು ಇನ್ನೊಬ್ಬ ರಾಜಕಾರಣಿಗೆ ಕೆಟ್ಟ ಹೆಸರು ತರುವ ರೀತಿ ತಂತ್ರಗಾರಿಕೆ ಮಾಡುವುದು, ಪರೋಕ್ಷವಾಗಿ ಬ್ಲಾಕ್‌ಮೇಲ್ ಮೂಲಕ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ