ಗ್ಯಾರಂಟಿಗಳಿಂದ ಅಭಿವೃದ್ಧಿ ಶೂನ್ಯ ಎಂದ ಸೂರಜ್‌ ರೇವಣ್ಣ

KannadaprabhaNewsNetwork |  
Published : Jan 09, 2025, 12:45 AM IST
8ಎಚ್ಎಸ್ಎನ್6 : ಸಕಲೇಶಪುರ ತಾಲೂಕಿನ ಮರಗತ್ತೂರು ಗ್ರಾಮದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಗುದ್ದಲಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು. ಜನರು ಯಾವುದೇ ಭಾಗ್ಯಗಳನ್ನು ಕೇಳದಿದ್ದರೂ ಸಹ ಓಟ್ ಬ್ಯಾಂಕ್‌ಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಕೇವಲ ಅನ್ನಭಾಗ್ಯ ಮಾತ್ರ ಅವಶ್ಯಕತೆಯಿತ್ತು. ಏಕೆಂದರೆ ಇದು ಕೂಲಿ ಕಾರ್ಮಿಕರಿಗೆ, ಬಡವರಿಗೆ ಅನುಕೂಲವಾಗುತ್ತದೆ. ಅನುದಾನಗಳ ಅಭಾವ ತುಂಬಾ ಇದ್ದು ಈ ಹಿನ್ನೆಲೆಯಲ್ಲಿ ನಾನು ಅಭಿವೃದ್ಧಿ ಕಾರ್ಯಗಳಿಗೆ ಹಣ ಕೊಡುತ್ತೇನೆ ಎಂದು ಹೇಳುವುದಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.

ತಾಲೂಕಿನ ಹೆತ್ತೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿ, ಈ ಹಿಂದೆ ಸಾಕಷ್ಟು ಬಾರಿ ಈ ಭಾಗಕ್ಕೆ ಆಗಮಿಸಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಿದ್ದೇನೆ. ವಿಧಾನ ಪರಿಷತ್ ಸದಸ್ಯನಾಗಿರುವುದರಿಂದ ನನಗೆ ಬರುವ ಅನುದಾನ ಕಡಿಮೆ, ಆದರೂ ಸಹ ಸಾಕಷ್ಟು ಅನುದಾನವನ್ನು ಈ ಭಾಗದ ದೇವಸ್ಥಾನಗಳು, ಸಮುದಾಯ ಭವನಗಳ ಮತ್ತು ರಸ್ತೆಗಳ ಅಭಿವೃದ್ಧಿಗೆ ಕೊಟ್ಟಿದ್ದೇನೆ. ಬೇರೆ ವಿಧಾನಪರಿಷತ್ ಸದಸ್ಯರಿಂದ ಸಹ ಹಣ ಕೊಡಿಸಲು ಶ್ರಮಿಸುತ್ತೇನೆ. ಇದು ಗ್ಯಾರಂಟಿಗಳ ಕಾಲವಾಗಿದ್ದು ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣ ದೊರಕುತ್ತಿಲ್ಲ. ಮಹಿಳೆಯರಿಗೆ ೨೦೦೦ ಹಣ ನೀಡಲಾಗುತ್ತಿದ್ದು ಇದೂ ಸಹ ಎಲ್ಲರಿಗೂ ದೊರಕುತ್ತಿಲ್ಲ. ಜನರು ಯಾವುದೇ ಭಾಗ್ಯಗಳನ್ನು ಕೇಳದಿದ್ದರೂ ಸಹ ಓಟ್ ಬ್ಯಾಂಕ್‌ಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಕೇವಲ ಅನ್ನಭಾಗ್ಯ ಮಾತ್ರ ಅವಶ್ಯಕತೆಯಿತ್ತು. ಏಕೆಂದರೆ ಇದು ಕೂಲಿ ಕಾರ್ಮಿಕರಿಗೆ, ಬಡವರಿಗೆ ಅನುಕೂಲವಾಗುತ್ತದೆ. ಅನುದಾನಗಳ ಅಭಾವ ತುಂಬಾ ಇದ್ದು ಈ ಹಿನ್ನೆಲೆಯಲ್ಲಿ ನಾನು ಅಭಿವೃದ್ಧಿ ಕಾರ್ಯಗಳಿಗೆ ಹಣ ಕೊಡುತ್ತೇನೆ ಎಂದು ಹೇಳುವುದಿಲ್ಲ. ಮುಂದಿನ ಮೇ ನಂತರ ಸರ್ಕಾರದ ಅನುದಾನ ಬಿಡುಗಡೆಯಾಗುವುದರಿಂದ ಅದರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಧ್ಯವಾದಷ್ಟು ನೀಡುತ್ತೇನೆ. ಇಡೀ ಜಿಲ್ಲೆಗೆ ನಾನು ಅನುದಾನ ಹಂಚಬೇಕಾಗಿದ್ದು ಆದರೂ ಸಹ ತಾಲೂಕಿನಲ್ಲಿ ನಾನು ಶಕ್ತಿ ಮೀರಿ ಅನುದಾನ ನೀಡಲು ಶ್ರಮಿಸುತ್ತೇನೆ ಮತ್ತು ದೇವೆಗೌಡರ ಬಳಿ ಮಾತನಾಡಿ, ರಾಜ್ಯಸಭಾ ಸದಸ್ಯರ ಅನುದಾನವನ್ನು ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಿಸುತ್ತೇನೆ ಎಂದರು. ಜಿ.ಪಂ ಮಾಜಿ ಸದಸ್ಯೆ ಉಜ್ಮಾ ರುಜ್ವಿ ಮಾತನಾಡಿ, ನಾನು ಪ್ರಪ್ರಥಮ ಬಾರಿಗೆ ಜಿ.ಪಂ ಸದಸ್ಯಳಾಗಿ ಆಯ್ಕೆಯಾದಾಗ ಮರಗತ್ತೂರು ಗ್ರಾಮಸ್ಥರ ಬೇಡಿಕೆಯಂತೆ ಎತ್ತಿನಹೊಳೆ ಯೋಜನೆಯಲ್ಲಿ ರೇವಣ್ಣನವರಿಗೆ ಮನವಿ ಮಾಡಿ ಸುಮಾರು ೨ಕೋಟಿ ರು. ಹಣ ರಸ್ತೆಗೆ ಬಿಡುಗಡೆ ಮಾಡಿಸಿದ್ದೆ. ಸೂರಜ್ ರೇವಣ್ಣರವರು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದರಲ್ಲಿ ಅನುಮಾನವಿಲ್ಲ ಎಂದರು. ಈ ಸಂದರ್ಭದಲ್ಲಿ ಕರಗೂರು, ಗೊದ್ದು, ಬಾಣಗೇರಿ ಗ್ರಾಮಗಳ ವಿವಿಧ ದೇವಸ್ಥಾನಗಳಿಗೆ ಅನುದಾನ ನೀಡಿದ ಹಿನ್ನೆಲೆಯಲ್ಲಿ ಭೇಟಿ ನೀಡಿದರು. ಇದೇ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಕವನ್ ಗೌಡ, ಪುರಸಭಾ ಸದಸ್ಯ ಪ್ರಜ್ವಲ್ , ಟಿಎಪಿಸಿಎಂಎಸ್ ಸದಸ್ಯ ಕರಗೂರು ರಮೇಶ, ಜೆಡಿಎಸ್ ಮುಖಂಡರಾದ ಹಾಡ್ಯ ಸುದರ್ಶನ, ಅರವಿಂದ್ ಬಿಳಿಸಾರೆ, ಸುಧೀರ್ ಚಿಂಪೂ ಮತ್ತಿತರರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌