ಈ ಬಾರಿ ರಥೋತ್ಸವ ಮತ್ತು ನರಸಿಂಹ ಜಯಂತಿ ಹಿನ್ನೆಲೆ, ಉತ್ಸವ ಮೂರ್ತಿಯನ್ನು ಮೂಲ ವಿಗ್ರಹದ ಮುಂಭಾಗದಲ್ಲಿ ಇರಿಸಲಾಗಿತ್ತು. ಇದರಿಂದ ಸೂರ್ಯರಶ್ಮಿ ಮೂಲ ವಿಗ್ರಹದ ಪಾದಗಳ ಬದಲು ಉತ್ಸವ ಮೂರ್ತಿಯ ಪಾದಗಳ ಮೇಲೆ ಬಿದ್ದಿತು. ಈ ರೀತಿಯ ಅಪರೂಪದ ಸಂದರ್ಭ ಮೂರು ವರ್ಷಕ್ಕೊಮ್ಮೆ ಮಾತ್ರ ಸಂಭವಿಸುತ್ತದೆ ಎಂದು ತಿಳಿದುಬಂದಿದೆ. ಈ ವಿದ್ಯಮಾನವನ್ನು 2021ರಲ್ಲಿ ಗಣಿತದ ಆಧಾರದ ಮೇಲೆ ಅಧ್ಯಯನ ಮಾಡಲಾಗಿದ್ದು, 2024ರಲ್ಲಿ ಅಧಿಕಾರಿಗಳು ಪರಿಶೀಲಿಸಿ ದೃಢಪಡಿಸಿದ ಬಳಿಕ ಪ್ರತಿವರ್ಷವೂ ಈ ದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುವ ಕ್ರಮ ಅನುಸರಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೇಲೂರು
ವಿಶ್ವವಿಖ್ಯಾತ ಚೆನ್ನಕೇಶವ ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ಅಪರೂಪದ ಸೂರ್ಯರಶ್ಮಿ ಕಿರಣ ಪ್ರವೇಶ ಈ ವರ್ಷವೂ ಸಂಭವಿಸಿ ವಿಸ್ಮಯ ಮೂಡಿಸಿತು. ಬುಧವಾರ ಬೆಳಿಗ್ಗೆ ಸುಮಾರು 6:15ರಿಂದ 6:20ರವರೆಗೆ, ಸೂರ್ಯನ ಕೆಂಪು ಕಿರಣಗಳು ದೇಗುಲ ಮುಂಭಾಗ ಮಹಾದ್ವಾರದ ಮೂಲಕ ನೇರವಾಗಿ ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಚೆನ್ನಕೇಶವಸ್ವಾಮಿ ಮೂಲ ವಿಗ್ರಹ ಸ್ಪರ್ಶಿಸಿದವು. ನಂತರ ಸೂರ್ಯನು ಮೇಲೇಳುತ್ತಿದ್ದಂತೆ, 6:42ಕ್ಕೆ ಆ ಕಿರಣಗಳು ನವರಂಗ ದ್ವಾರವನ್ನು ದಾಟಿ ಹಿಂದಕ್ಕೆ ಸರಿದವು. ಈ ಅಪರೂಪದ ಘಟನೆ ಪ್ರತಿ ವರ್ಷ ಏಪ್ರಿಲ್ 21 ಅಥವಾ 22 ರಂದು, ಸೌರಮಾನ ಪ್ರಕಾರ ಮೇಷ ಮಾಸದ 9ನೇ ದಿನ ಸಂಭವಿಸುತ್ತದೆ. ಈ ಬಾರಿ ರಥೋತ್ಸವ ಮತ್ತು ನರಸಿಂಹ ಜಯಂತಿ ಹಿನ್ನೆಲೆ, ಉತ್ಸವ ಮೂರ್ತಿಯನ್ನು ಮೂಲ ವಿಗ್ರಹದ ಮುಂಭಾಗದಲ್ಲಿ ಇರಿಸಲಾಗಿತ್ತು. ಇದರಿಂದ ಸೂರ್ಯರಶ್ಮಿ ಮೂಲ ವಿಗ್ರಹದ ಪಾದಗಳ ಬದಲು ಉತ್ಸವ ಮೂರ್ತಿಯ ಪಾದಗಳ ಮೇಲೆ ಬಿದ್ದಿತು. ಈ ರೀತಿಯ ಅಪರೂಪದ ಸಂದರ್ಭ ಮೂರು ವರ್ಷಕ್ಕೊಮ್ಮೆ ಮಾತ್ರ ಸಂಭವಿಸುತ್ತದೆ ಎಂದು ತಿಳಿದುಬಂದಿದೆ. ಈ ವಿದ್ಯಮಾನವನ್ನು 2021ರಲ್ಲಿ ಗಣಿತದ ಆಧಾರದ ಮೇಲೆ ಅಧ್ಯಯನ ಮಾಡಲಾಗಿದ್ದು, 2024ರಲ್ಲಿ ಅಧಿಕಾರಿಗಳು ಪರಿಶೀಲಿಸಿ ದೃಢಪಡಿಸಿದ ಬಳಿಕ ಪ್ರತಿವರ್ಷವೂ ಈ ದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುವ ಕ್ರಮ ಅನುಸರಿಸಲಾಗುತ್ತಿದೆ.ಸಾಹಿತಿ ಸಂಶೋಧಕ ಡಾ. ಶ್ರೀವತ್ಸ ಎಸ್ ವಟಿ ಅವರು ಮಾತನಾಡಿ, “ಇದು ಸಂಪೂರ್ಣವಾಗಿ ಪ್ರಕೃತಿ ಮತ್ತು ಖಗೋಳಶಾಸ್ತ್ರದ ಸಮನ್ವಯದಿಂದ ಉಂಟಾಗುವ ವೈಜ್ಞಾನಿಕ ಘಟನೆ. ದೇವಾಲಯದ ವಿನ್ಯಾಸವನ್ನು ಅಕ್ಷಾಂಶ, ರೇಖಾಂಶಗಳ ಲೆಕ್ಕಾಚಾರದೊಂದಿಗೆ ನಿರ್ಮಿಸಿರುವುದರಿಂದ ಸೂರ್ಯ ಕಿರಣಗಳು ನಿರ್ದಿಷ್ಟ ದಿನದಲ್ಲಿ ಮಾತ್ರ ಗರ್ಭಗುಡಿಗೆ ನೇರವಾಗಿ ಪ್ರವೇಶಿಸುತ್ತವೆ” ಎಂದು ವಿವರಿಸಿದರು.ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅವರು ತಿಳಿಸಿ, “ಈ ದೇವಾಲಯವನ್ನು ಆಚಾರ್ಯರು ಶಾಸ್ತ್ರೋಕ್ತವಾಗಿ ಪ್ರತಿಷ್ಠೆ ಮಾಡಿದ್ದಾರೆ. ಮೇಷ ಮಾಸದ ಒಂಬತ್ತನೇ ದಿನ, ಸೂರ್ಯರಶ್ಮಿ ಮಹಾದ್ವಾರ, ನವರಂಗ, ಸುಖನಾಸಿ ಮೂಲಕ ಸಾಗುತ್ತಾ ಗರ್ಭಗುಡಿಗೆ ಪ್ರವೇಶಿಸುವುದು ದೇವಾಲಯದ ವೈಶಿಷ್ಟ್ಯ ಎಂದರು. ರಾಮಾನುಜ ಉತ್ಸವದ ಹಿನ್ನೆಲೆಯಲ್ಲಿ ಉತ್ಸವ ಮೂರ್ತಿ ನವರಂಗದಲ್ಲೇ ಇರಲಾಗಿದ್ದರಿಂದ ಈ ಬಾರಿ ಅದರ ಮೇಲೆ ಕಿರಣಗಳು ಪ್ರತಿಬಿಂಬಿಸಿದವು ಎಂದೂ ಹೇಳಿದರು.ಈ ಘಟನೆ ಭಾರತೀಯ ದೇವಾಲಯ ವಾಸ್ತುಶಿಲ್ಪದ ವೈಜ್ಞಾನಿಕತೆ, ಖಗೋಳ ಜ್ಞಾನ ಮತ್ತು ಶಿಲ್ಪಕಲೆಯ ಅದ್ಭುತ ಸಂಯೋಜನೆಗೆ ಜೀವಂತ ಸಾಕ್ಷಿ ಎಂದು ಹೇಳಲಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.