ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹಲಗಾಪುರ ಗ್ರಾಮದ ನಿವಾಸಿ ಬಸವರಾಜು ಎಂಬಾತ ಬಂಧಿತ ಆರೋಪಿ. ಈತ ಕಾಡುಪ್ರಾಣಿಗಳ ಬೇಟೆಗಾಗಿ ನಾಡಬಂದೂಕುಗಳನ್ನು ಜೊತೆಗೆ ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಸಹ ಶೇಖರಣೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಂತೆ ಅವರ ನೇತೃತ್ವದ ತನಿಖಾ ತಂಡದ ಎಸ್ಸೈ ತಖೀವುಲ್ಲಾ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ನೇತೃತ್ವದಲ್ಲಿ ಸಿಬ್ಬಂದಿ ತಂಡ ರಾತ್ರೋರಾತ್ರಿ ತೋಟದ ಮನೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ, ತೋಟದ ಮನೆಯಲ್ಲಿದ್ದ ಮೂರು ನಾಡಬಂದೂಕುಗಳು, ಸ್ಫೋಟಕಗಳಿಗೆ ಸಂಬಂಧಿಸಿದ ಕೆಲ ಪರಿಕರಗಳು ಮತ್ತು ಸುಮಾರು 220 ಗ್ರಾಂ ಒಣ ಗಾಂಜಾ ಪತ್ತೆಯಾಗಿ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಹಲಗಾಪುರದ ನಿವಾಸಿ ಬಸವರಾಜು ಎಂಬಾತನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ. ಬಂಧಿತನಿಂದ 3 ನಾಡ ಬಂದೂಕು, 2 ತಲೆಗೆ ಹಾಕುವ ಬೇಟೆಗೆ ಬಳಸುವ ಬ್ಯಾಟರಿ, 220 ಗ್ರಾಂ ಗಾಂಜಾ, ಗನ್ ಪೌಡರ್, 40 ಬಾಲ್ಸ್ (ಗುಂಡು)ಗಳನ್ನು ವಶಕ್ಕೆ ಪಡೆದಿದ್ದಾರೆ, ಕಾರ್ಯಾಚರಣೆ ವೇಳೆ ಎಎಸ್ಐ ಗೋಪಾಲ್, ಮಲ್ಲಿಕಾರ್ಜುನಸ್ವಾಮಿ, ವೆಂಕಟೇಶ್, ರವಿ, ಬಿಳಿಗೌಡ ಇನ್ನಿತರು ಪಾಲ್ಗೊಂಡಿದ್ದರು.