....ಕಲುಷಿತ ನೀರು ಸೇವನೆ ಶಂಕೆ: 17ಕ್ಕೂ ಹೆಚ್ಚು ಜನ ಅಸ್ವಸ್ಥ

KannadaprabhaNewsNetwork |  
Published : Jul 04, 2026, 01:30 AM IST
ಸುದ್ದಿ ಚಿತ್ರ ೧ ಆರೋಗ್ಯ ಇಲಾಖೆಯ   ಜಿಲ್ಲಾ ಆರೋಗ್ಯಾಧಿಕಾರಿ  ಡಾ. ಮಹೇಶ್ ಕುಮಾರ್  , ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ  ಗ್ರಾಮ ಪಂಚಾಯಿತಿ ಪಿಡಿಒ ವಜ್ರೇಶ್ ಕುಮಾರ್‌    ಹಾಗೂ  ಇತರೆ ಇಲಾಖೆಗಳ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು | Kannada Prabha

ಸಾರಾಂಶ

ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ೧೭ ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ

ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ

ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ೧೭ ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಳೆದ ೪-೫ ದಿನಗಳಿಂದ ಗ್ರಾಮದ ಕೆಲವರಲ್ಲಿ ವಾಂತಿ, ಭೇದಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಪ್ರತಿದಿನ ಬಶೆಟ್ಟಹಳ್ಳಿಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ತಾಲೂಕು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರು ಹೇಳುವ ಪ್ರಕಾರ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಚರಂಡಿ ನೀರು ಮಿಶ್ರಣವಾಗಿರುವುದೇ ಸಮಸ್ಯೆಗೆ ಪ್ರಮುಖ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಗ್ರಾಮಸ್ಥರಷ್ಟೇ ಅಲ್ಲದೆ ಸುಮಾರು 50ಕ್ಕೂ ಅಧಿಕ ಜಾನುವಾರುಗಳ ಆರೋಗ್ಯದಲ್ಲಿಯೂ ಏರುಪೇರು ಕಂಡುಬಂದಿದೆ. ಸಮಸ್ಯೆ ಉಲ್ಬಣಗೊಂಡರೂ ಸಂಬಂಧಪಟ್ಟ ಅಧಿಕಾರಿಗಳು ಆರಂಭದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅಸ್ವಸ್ಥರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆಯೊಂದಿಗೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಗ್ರಾಮದಲ್ಲಿ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ.

ಶುದ್ಧ ಕುಡಿವ ನೀರಿನ ಸಮಸ್ಯೆ:

ಗ್ರಾಮದ ಬಹುತೇಕ ಎಲ್ಲಾ ಮನೆಗಳು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಕುಡಿಯುತ್ತಿದ್ದು, ಆ ನೀರು ಕಲುಷಿತ ಮಿಶ್ರಣ ಆಗಿರುವುದಿಂದ ಜನರಿಗೆ ವಾಂತಿ, ಭೇದಿ, ತಲೆನೋವು, ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಇನ್ನೂ ಗ್ರಾಮದಲ್ಲಿ ಒಂದು ವರ್ಷದಿಂದ ದೊಡ್ಡತೇಕಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯಿಂದ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವು ರಿಪೇರಿಯಾಗಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳು ಎಷ್ಟು ಬಾರಿ ರಿಪೇರಿ ಮಾಡಿಸಿದರೂ ಎರಡು ಮೂರು ದಿನ ನೀರು ಬರುತ್ತಿತ್ತು, ಇದೀಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಮನೆ ಮನೆಗೂ ಭೇಟಿ:

ಗ್ರಾಮದಲ್ಲಿ ಆತಂಕಗೊಂಡ ಜನನ್ನು ಪ್ರತಿ ದಿನ ಪರಿಶೀಲಿಸಲು ಅಂಗನವಾಡಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೂ ಭೇಟಿ ನೀಡಿ ಜನರ ಮಾಹಿತಿಯನ್ನು ಪಡೆಯುತ್ತಾ ಆರೋಗ್ಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ, ಹಾಗೆಯೇ ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡಿ ಧೈರ್ಯವನ್ನು ತುಂಬುತ್ತಿದ್ದಾರೆ. ಶುಕ್ರವಾರ ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.

ಕೋಟ್

ತಾಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರಿನ ಸೇವನೆ ಆಗಿರುವ ಶಂಕೆಯಿಂದ 17 ಮಂದಿ ಅಸ್ವಸ್ಥರಾಗಿದ್ದು ಯಾರು ಕೂಡ ಆಸ್ಪತ್ರೆಗೆ ದಾಖಲಾಗಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ಪ್ರತಿ ಮನೆಗೂ ಭೇಟಿ ನೀಡಿ ವೈದ್ಯರು ಆರೋಗ್ಯ ಪರಿಶೀಲಿಸಿದ್ದಾರೆ. ಶುದ್ಧ ನೀರಿನ ಘಟಕ ಕೆಟ್ಟು ಹೋಗಿರುವ ಕಾರಣ ಕಲುಷಿತ ನೀರು ಸೇವನೆ ಆಗಿರುವ ಸಾಧ್ಯತೆ ಇದ್ದು ನಮ್ಮ ಆರೋಗ್ಯ ಇಲಾಖೆಯ ತಂಡ ಗ್ರಾಮದಲ್ಲಿ ಮೊಕ್ಕಾಂ ಹೋಡಿದ್ದು ಕಟ್ಟೆಚ್ಚರ ವಹಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ

ಡಾ.ವೆಂಕಟೇಶಮೂರ್ತಿ, ತಾಲೂಕು ಆರೋಗ್ಯಾಧಿಕಾರಿ

ಸುದ್ದಿ ಚಿತ್ರ ೧

ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್ , ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಗ್ರಾಮ ಪಂಚಾಯಿತಿ ಪಿಡಿಒ ವಜ್ರೇಶ್ ಕುಮಾರ್‌ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸವವಲತ್ತುಗಳನ್ನು ಶ್ರಮಿಕ ವರ್ಗದವರು ಸದ್ಭಳಕೆ ಮಾಡಬೇಕು: ಡಾ.ಕೆ.ಪಿ.ಅಂಶುಮಂತ್
ಡೇರಿ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಿ: ಬಮೂಲ್‌ ನಿರ್ದೇಶಕ