141 ಸಂಸದರ ಅಮಾನತು ಹಿಟ್ಲರ್‌ ಧೋರಣೆ: ಸುರ್ಜೇವಾಲಾ

KannadaprabhaNewsNetwork |  
Published : Dec 20, 2023, 01:15 AM IST
ಸುರ್ಜೇವಾಲ | Kannada Prabha

ಸಾರಾಂಶ

ಒಂದು ಕಡೆ ಸಂಸತ್‌ ಮೇಲೆ ದುಷ್ಕರ್ಮಿಗಳ ದಾಳಿ ನಡೆದರೆ, ಮತ್ತೊಂದು ಕಡೆ ಪ್ರಧಾನಿ ಮೋದಿ ಅವರು ಸಂಸದರ ಮೇಲೆ ಮತ್ತೊಂದು ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ. ಸಂಸದರನ್ನು ಅಮಾನತು ಮಾಡಿ ಅವರ ಹಕ್ಕನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷವೇ ಇರಬಾರದು ಎಂಬುದು ಇವರ ಅಜೆಂಡಾ ಆಗಿದೆ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಸತ್‌ ಮೇಲಿನ ದಾಳಿಯ ಭದ್ರತಾ ವೈಫಲ್ಯದ ಬಗ್ಗೆ ಉತ್ತರ ನೀಡುವಂತೆ ಪ್ರತಿಪಕ್ಷಗಳು ಮಾಡಿರುವ ಆಗ್ರಹಕ್ಕೆ ಮನ್ನಣೆ ನೀಡದೆ ಕೇಂದ್ರ ಸರ್ಕಾರ ಹಿಟ್ಲರ್‌ ಧೋರಣೆ ತೋರಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಿಡಿ ಕಾರಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಸತ್‌ ಮೇಲಿನ ದಾಳಿಯ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು. ಭದ್ರತಾ ವೈಫಲ್ಯದಿಂದ ಈ ದಾಳಿ ನಡೆದಿದೆ. ಈ ಸಂಬಂಧ ಉತ್ತರ ಕೊಡಬೇಕಿರುವುದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಕರ್ತವ್ಯವಾಗಿದೆ. ಆದರೆ, ಉತ್ತರ ನೀಡದೆ ಅವರು ಹಿಟ್ಲರ್‌ ಧೋರಣೆ ಅನುಸರಿಸಿದ್ದಾರೆ. ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷಗಳ 141 ಸಂಸದರನ್ನು ಅಮಾನತು ಮಾಡಿ ಪ್ರಜಾಪ್ರಭುತ್ವ ವಿರೋಧಿ ನಿಲುವು ಅನುಸರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರತಾ ಲೋಪ ಉಂಟಾಗಲು ಕಾರಣರಾದ ಕರ್ನಾಟಕದ ಸಂಸತ್‌ ಸದಸ್ಯ ಪ್ರತಾಪ್‌ ಸಿಂಹ ಅವರನ್ನು ಅಮಾನತು ಮಾಡುವುದನ್ನು ಬಿಟ್ಟು ಪ್ರತಿಪಕ್ಷಗಳ ಸಂಸದರನ್ನು ಅಮಾನತು ಮಾಡಿರುವುದು ನಿಜಕ್ಕೂ ಖಂಡನೀಯ. ಭಾರತೀಯ ಸಂಸತ್‌ ವ್ಯವಸ್ಥೆಯಲ್ಲಿ ಇದೊಂದು ಕರಾಳ ದಿನ. ಒಂದು ಕಡೆ ಸಂಸತ್‌ ಮೇಲೆ ದುಷ್ಕರ್ಮಿಗಳ ದಾಳಿ ನಡೆದರೆ, ಮತ್ತೊಂದು ಕಡೆ ಪ್ರಧಾನಿ ಮೋದಿ ಅವರು ಸಂಸದರ ಮೇಲೆ ಮತ್ತೊಂದು ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ. ಸಂಸದರನ್ನು ಅಮಾನತು ಮಾಡಿ ಅವರ ಹಕ್ಕನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷವೇ ಇರಬಾರದು ಎಂಬುದು ಇವರ ಅಜೆಂಡಾ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್‌ ಮಾತನಾಡಿ, ಸಂಸತ್‌ ಭದ್ರತೆ ಮೇಲೆ ಕಿಡಿಗೇಡಿ ಗಳ ದಾಳಿ ನಡೆದರೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವಿಪಕ್ಷ ಸಂಸದರ ಮೇಲೆ ದಾಳಿ ನಡೆಸಿದ್ದಾರೆ. 141 ಸಂಸದರನ್ನು ಅಮಾನತು ಮಾಡಿರುವ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುತ್ತೇನೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಸಂಸತ್‌ ಇತಿಹಾಸಕ್ಕೆ ಕಪ್ಪು ಚುಕ್ಕೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ
ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ