ಗೋಕರ್ಣ: ಮರೆತು ಹೋದ ಮನೆ ಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ನಾವು ನಮ್ಮ ಭಾಷೆ ಮಾತನಾಡುವುದು ದೇಶ,ಸಂಸ್ಕಂತಿ, ಭಾಷೆ,ಪರಂಪರೆಗೆ ನಾವು ಸಲ್ಲಿಸುವ ಅತಿದೊಡ್ಡ ಸೇವೆ. ಇದು ಜೀವನಕ್ಕೆ ಸ್ವಾರಸ್ಯವನ್ನೂ ತರುತ್ತದೆ ಎಂದರು.
ಶುದ್ಧವಾದ ಮಾತೃ ಭಾಷೆ ಮಾತನಾಡುವ ಪ್ರಯತ್ನ ಸ್ವಭಾಷಾ ಚಾತುರ್ಮಾಸ್ಯದ ತಿರುಳು. ಮರೆತ ಪದಗಳನ್ನು ನೆನಪಿಸಿಕೊಳ್ಳೋಣ. ಪರಕೀಯತೆ ನಮ್ಮ ನಾಲಿಗೆಯಲ್ಲೇ ಇದೆ. ನಮ್ಮ ನಾಲಿಗೆ ಕೆಡಿಸಿಕೊಳ್ಳದಿರೋಣ. ಸಂಸ್ಕಾರದಿಂದ ಶಬ್ದ. ಶಬ್ದದಿಂದ ವಾಕ್ಯ; ಅದು ಭಾಷೆಯ ಮೂಲ. ಆದ್ದರಿಂದ ಪ್ರತಿ ಪದವೂ ತನ್ನೊಂದಿಗೆ ಆ ಭಾಷೆಯ ಸಂಸ್ಕಾರ ತರುತ್ತದೆ. ಈ ಬಗ್ಗೆ ಎಚ್ಚರ ಅಗತ್ಯ ಎಂದು ಪ್ರತಿಪಾದಿಸಿದರು.ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆ ಉಳಿಸುವುದು ಕೂಡಾ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.
ಹಲವು ವರ್ಷಗಳ ಹಿಂದೆ ಬಿಎಂಶ್ರೀಯವರ ಕಾಲದಲ್ಲಿ ಒಂದು ಇಂಗ್ಲಿಷ್ ಪದ ಬಳಸಿದರೆ ಒಂದು ರೂಪಾಯಿ ತಪ್ಪುಕಾಣಿಕೆ ತೆಗೆದಿಡಬೇಕು ಎಂಬ ಕಾಸಿನ ಸಂಘ ಹಿಂದೆ ಅಸ್ತಿತ್ವದಲ್ಲಿತ್ತು. ಕನ್ನಡದ ಸಾರ ಉಳಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಕನ್ನಡ ಶುದ್ಧವಾಗಿ ಮಾತನಾಡಲು ಕಲಿಯೋಣ. ಭಾಷೆಯಲ್ಲಿ ಒಂದು ಪದ ಮರೆಯಾದರೆ ಅದಕ್ಕೆ ಸಂಬಂಧಿಸಿದ ಸಂಸ್ಕಂತಿ- ಸಂಸ್ಕಾರ ಎಲ್ಲವೂ ನಾಶವಾಗುತ್ತದೆ. ಒಂದು ಪರಕೀಯ ಪದ ಆಯಾ ಭಾಷೆಯ ಸಂಸ್ಕಾರ ತರುತ್ತದೆ. ನಮಗೆ ಗೊತ್ತಾಗದಂತೆ ನಾವೇ ಪರಕೀಯರಾಗುತ್ತಿದ್ದೇವೆ. ಉದಾಹರಣೆಗೆ ಇಂಗ್ಲಿಷ್ ನಾವು ಆವಾಹಿಸಿಕೊಂಡಿರುವ ಆಕ್ರಮಣ. ನಮ್ಮತನ ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.
ನಮ್ಮ ಮಾತೃಭಾಷೆಯ ಹಲವು ಪದಗಳು ಮರೆತು ಹೋಗಿವೆ. ಕನ್ನಡ ಮಾತನಾಡುವ ಪ್ರಯತ್ನ ಇಂದಿನಿಂದಲೇ ಆರಂಭವಾಗಲಿ, ಕನ್ನಡ ಮಾತನಾಡಬೇಕಾದಲ್ಲಿ ಕನ್ನಡವನ್ನೇ ಮಾತನಾಡೋಣ. ಪರಿಸ್ಥಿತಿಗೆ ಅನುಗುಣವಾಗಿ ಆಂಗ್ಲ ಭಾಷೆ ಮಾನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಅದನ್ನು ಬೆರೆಸುವುದು ಬೇಡ. ಹಾಗೆ ಮಾಡಿದರೆ ಇಡೀ ಸಮಾಜವೇ ಭಾಷೆ ಇಲ್ಲದ ಸಮಾಜವಾಗಿ ಮಾರ್ಪಾಡಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಮೊದಲ ಹಂತದಲ್ಲಿ ಪರಕೀಯ ಶಬ್ದ ಕಡಿಮೆ ಮಾಡೋಣ; ಅಂತಿಮವಾಗಿ ಶುದ್ಧ ಭಾಷೆ ಉಳಿಸಿ ಬೆಳೆಸೋಣ. ಚಾತುರ್ಮಾಸ್ಯದಲ್ಲಿ ನಾಲಿಗೆ ಶುದ್ಧೀಕರಣದ ಕಾರ್ಯ ಮಾಡೋಣ.ನಮ್ಮತನ ಉಳಿಸಿಕೊಳ್ಳೋಣ ಎಂದು ಆಶಿಸಿದರು.