ಸ್ವಾಧ್ಯಾಯ- ಪ್ರವಚನಗಳಿಂದ ಚಿತ್ತ ಶುದ್ಧಿ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

KannadaprabhaNewsNetwork |  
Published : Jan 28, 2025, 12:50 AM IST
೨೭ಎಸ್.ಆರ್.ಎಸ್೭ಪೊಟೋ೧ ಮಠದಲ್ಲಿ ಒಂದು ಹಂತದ ವಿದ್ಯಾಭ್ಯಾಸವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಸ್ವರ್ಣಶಂಕರ ಪ್ರಶಸ್ತಿ ಪುರಸ್ಕಾರ ನೀಡಿ, ಗೌರವಿಸಲಾಯಿತು.೨೭ಎಸ್.ಆರ್.ಎಸ್೭ಪೊಟೋ೨ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಸ್ವಾಧ್ಯಾಯ ಮತ್ತು ಪ್ರವಚನಗಳನ್ನು ಯಾವಾಗಲೂ ಬಿಡಬಾರದು. ಇದರಿಂದ ಓದಿದ ವಿದ್ಯೆ ಯಾವಾಗಲೂ ನೆನಪಿರಲು ಸಾಧ್ಯವಾಗುತ್ತದೆ ಮತ್ತು ವಿದ್ಯೆಯ ಪರಂಪರೆಯು ಮುಂದುವರಿಯುತ್ತದೆ.

ಶಿರಸಿ: ಸ್ವಾಧ್ಯಾಯ- ಪ್ರವಚನಗಳಿಂದ ಚಿತ್ತ ಶುದ್ಧಿ, ಜ್ಞಾನ ವೃದ್ಧಿ ಎಂದು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸೋಮವಾರ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಹಮ್ಮಿಕೊಂಡಿದ್ದ ಶಾಂಕರ ಸರಸ್ವತೀ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ದಕ್ಷಿಣಾಮೂರ್ತಿಯನ್ನು ಆಚಾರ್ಯರು ಅತ್ಯಂತ ಸುಂದರವಾಗಿ ಸ್ತುತಿಸಿದ್ದಾರೆ. ತನ್ನ ನಿಜಸ್ವರೂಪವನ್ನು ಚಿನ್ಮುದ್ರೆಯ ಮೂಲಕ ತನ್ನನ್ನು ಆರಿಸಿ ಬಂದ ಎಲ್ಲ ಜನರಿಗೆ ತೋರಿಸುತ್ತಿರುವ ಗುರುಗಳು ಎಂದು ಹೇಳುತ್ತಾರೆ. ಅದೇ ರೀತಿಯ ಸ್ವರೂಪವರು ಶಂಕರರು ಎಂದು ವಿದ್ಯಾರಣ್ಯರು ಹೇಳುತ್ತಾರೆ. ದಕ್ಷಿಣಾಮೂರ್ತಿ ಅವತಾರದಲ್ಲಿ ಭಗವಂತನು ಒಂದು ವಟ ವೃಕ್ಷದ ಮೂಲದಲ್ಲಿ ಮೌನವಾಗಿ ಕುಳಿದ್ದಾನೆ. ಆದರೆ ಶಂಕರಾಚಾರ್ಯರ ಅವತಾರದಲ್ಲಿ ಭಗವಂತ ಎಲ್ಲರಿಗೂ ಧರ್ಮವನ್ನು ಬೋಧಿಸುತ್ತ ಎಲ್ಲ ಕಡೆ ಓಡಾಡುತ್ತಿದ್ದಾರೆ.

ದಕ್ಷಿಣಾ ಮೂರ್ತಿಗೂ ಹಾಗೂ ಶಂಕರ ಮೂರ್ತಿಗೂ ಇರುವ ಅಂತರ ಇದೆ ಎಂದು ಹೇಳುತ್ತಾರೆ. ಉಳಿದೆಲ್ಲ ಸಮವಾಗಿದೆ ಎಂದು ಶಂಕರರನ್ನು ವರ್ಣಿಸುತ್ತಾರೆ. ಒಂದೇ ಕಡೆ ಕುಳಿತುಕೊಂಡರೆ ಎಲ್ಲ ಜನರನ್ನು ಮುಟ್ಟಲು ಸಾಧ್ಯವಿಲ್ಲ ಎನ್ನುವ ದೃಷ್ಟಿಯಿಂದ ಎಲ್ಲ ಕಡೆ ಸಂಚರಿಸತೊಡಗಿದರು. ಆ ರೀತಿಯಾಗಿ ಮಾಡಿದ್ದರಿಂದ ಭರತಖಂಡ ಇಷ್ಟು ಮೇಲಕ್ಕೆ ಏಳಲು ಸಾಧ್ಯವಾಯಿತು. ಅಂತಹ ಶಂಕರ ಭಗವತ್ಪಾದರ ಸ್ಮರಣೆಯ ಜತೆ ಈ ಪ್ರಶಸ್ತಿ ಪ್ರದಾನವು ನಡೆದಿದೆ ಎಂದರು.ಸ್ವಾಧ್ಯಾಯ ಮತ್ತು ಪ್ರವಚನಗಳನ್ನು ಯಾವಾಗಲೂ ಬಿಡಬಾರದು. ಇದರಿಂದ ಓದಿದ ವಿದ್ಯೆ ಯಾವಾಗಲೂ ನೆನಪಿರಲು ಸಾಧ್ಯವಾಗುತ್ತದೆ ಮತ್ತು ವಿದ್ಯೆಯ ಪರಂಪರೆಯು ಮುಂದುವರಿಯುತ್ತದೆ ಎಂದ ಶ್ರೀಗಳು, ಓದಿದ ವಿಷಯಗಳನ್ನು ಅವಲೋಕನ, ಪಾಠ, ಪ್ರವಚನಗಳನ್ನು ಮಾಡುವುದನ್ನು ಮುಂದುವರಿಸಬೇಕು. ವಿದ್ಯೆಯು ಯಾವಾಗಲೂ ಖರ್ಚು ಮಾಡಿದ ಹಾಗೆ ಬೆಳೆಯುತ್ತ ಹೋಗುತ್ತದೆ ಎಂದರು.ನಕಾರಾತ್ಮಕ ಭಾವನೆಯಿಂದ ಯಾವ ಸಾಧನೆಯೂ ಆಗುವುದಿಲ್ಲ. ನಕಾರಾತ್ಮಕ ಭಾವನೆಯನ್ನು ಯಾವಾಗಲೂ ಯಾರೂ ಮಾಡಿಕೊಳ್ಳಬಾರದು. ಏನು ಉಂಟು ಎಂಬುದನ್ನು ಚಿಂತನೆಯನ್ನು ಮಾಡಬೇಕು. ಗುರುಗಳು ಕೊಟ್ಟ ವಿಷಯಗಳನ್ನು ಇಟ್ಟುಕೊಂಡು ಅದನ್ನು ಸಾಧನೆಯನ್ನು ಮಾಡಿದರೆ ಗಟ್ಟಿತನ ಬಂದು ಇನ್ನೊಬ್ಬರಿಗೆ ಕೊಡುವ ಸಾಮರ್ಥ್ಯ ಬಂದೇ ಬರುತ್ತದೆ. ನಕಾರಾತ್ಮಕ ಭಾವನೆಯನ್ನು ಕೈಬಿಟ್ಟು ಇನ್ನಷ್ಟು ಅಧ್ಯಯನ, ಅಧ್ಯಾಪನದಲ್ಲಿ ತೊಡಗಬೇಕು. ಆಗ ಮತ್ತಷ್ಟು ಗಟ್ಟಿತನ ಬರುತ್ತದೆ. ಆಗಾಗ ನಡೆಯುವ ಚಿಂತನಾ ಗೋಷ್ಠಿಗೆ ಹೋಗಿ ಅಲ್ಲಿಯ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ಗಮನಹರಿಸಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಶಿರಳಗಿ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕಿನ ಉದ್ದೇಶವನ್ನು ವೇದವು ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಭಗವತ್ಪ್ರಾಪ್ತಿಯೇ ಮೂಲ ಉದ್ದೇಶ ಆದರಿಂದಲೇ ಶಾಂತಿ, ಸಮಾಧಾನ. ಸಂಸ್ಕೃತ ಶಾಸ್ತ್ರ ಅಧ್ಯಯನ ಮಾಡಿದವರು ಸ್ವಾಧ್ಯಾಯ ಮತ್ತು ಪ್ರವಚನಗಳನ್ನು ಬಿಡಬೇಡಿ ಎಂದರು. ಸ್ವರ್ಣವಲ್ಲೀಯ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ವೇದಗಳೆಲ್ಲ ನಮ್ಮ ಪ್ರಾಚೀನ ಋಷಿಗಳಿಗೆ ತಪಸ್ಸನ್ನು ಮಾಡುವಾಗ ಈಶ್ವರಾನುಗ್ರಹದಿಂದ ಗೋಚರಿಸಿದಂತವುಗಳು. ಹಾಗಾಗಿ ಅವುಗಳು ಮಾನವ ನಿರ್ಮಿತವಾದ ಕೃತಿಗಳಲ್ಲ. ಅಲ್ಲಿರುವುದೆಲ್ಲ ಸತ್ಯವೇ, ಅವುಗಳೆ ಸಕಲ ಮಾನವ ಜನಾಂಗದ ಶ್ರೇಯಸ್ಸಿಗೆ ಕಾರಣವಾಗಿದೆ ಎಂದು ನಂಬಿದ್ದೇವೆ ಎಂದರು.

ವಿದ್ವಾನ್ ಸೂರ್ಯನಾರಾಯಣ ಭಟ್ಟ ಹಿತ್ಲಳ್ಳಿ ಅವರು ಪೂರ್ವ ಮೀಮಾಂಸಾದ ವಿಚಾರಗಳನ್ನು ನಿರೂಪಿಸಿದರು. ಪ್ರಾಚಾರ್ಯ ಡಾ. ಕೃಷ್ಣ ಜೋಶಿ ಮೂಲೆಮನೆ ಇದ್ದರು. ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿ ಒಂದು ಹಂತದ ವಿದ್ಯಾಭ್ಯಾಸವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಸ್ವರ್ಣಶಂಕರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸುಮಾರು ೧೦೦ಕ್ಕೂ ಹೆಚ್ಚು ಮಾತೆಯರು ಶ್ರೀಶಂಕರ ಸ್ತೋತ್ರಗಳನ್ನು ಪಠಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!