ಜನವರಿಯಲ್ಲಿ ಸ್ವನಿಧಿ ಬೃಹತ್‌ ಸಮಾವೇಶ: ನಳಿನ್‌ ಕುಮಾರ್‌

KannadaprabhaNewsNetwork |  
Published : Dec 19, 2023, 01:45 AM ISTUpdated : Dec 19, 2023, 01:46 AM IST
ಪುರಭವನದಲ್ಲಿ ಸ್ವನಿಧಿ ಸಮೃದ್ಧಿ ಮೇಳ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜನೋಪಯೋಗಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರಧಾನಮಂತ್ರಿ ಪರಿಕಲ್ಪನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 12.61 ಕೋಟಿ ರು. ಬ್ಯಾಂಕ್‌ ಸಾಲ ವಿತರಿಸಲಾಗಿದೆ. ಒಟ್ಟು 8851 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ ಎಂದು ದ.ಕ. ಸಂಸದ ನಳಿನ್‌ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಜನವರಿ 2ನೇ ವಾರದಲ್ಲಿ ಮಂಗಳೂರಿನಲ್ಲಿ 10 ಸಾವಿರ ಮಂದಿ ಫಲಾನುಭವಿಗಳ ಉಪಸ್ಥಿತಿಯಲ್ಲಿ ಸ್ವನಿಧಿ ಬೃಹತ್‌ ಸಮಾವೇಶ ಆಯೋಜಿಸಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದ.ಕ. ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ನಗರದ ಪುರಭವನದಲ್ಲಿ ಸೋಮವಾರ ಸ್ವನಿಧಿ ಸಮೃದ್ಧಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರ ಜನೋಪಯೋಗಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರಧಾನಮಂತ್ರಿ ಪರಿಕಲ್ಪನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 12.61 ಕೋಟಿ ರು. ಬ್ಯಾಂಕ್‌ ಸಾಲ ವಿತರಿಸಲಾಗಿದೆ. ಒಟ್ಟು 8851 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ ಎಂದು ನಳಿನ್‌ ಕುಮಾರ್ ತಿಳಿಸಿದರು.ಪ್ರಥಮ ಹಂತದಲ್ಲಿ 10 ಸಾವಿರ ರು.ನಂತೆ ಒಟ್ಟು 6,538 ಫಲಾನುಭವಿಗಳಿಗೆ 6.54 ಕೋಟಿ ರು., ದ್ವಿತೀಯ ಹಂತದಲ್ಲಿ 20 ಸಾವಿರ ರು.ಗಳಂತೆ 1829 ಫಲಾನುಭವಿಗಳಿಗೆ 3.66 ಕೋಟಿ ರು. ಹಾಗೂ ತೃತೀಯ ಹಂತದ 50 ಸಾವಿರ ರು. ಸಾಲ ಯೋಜನೆಯಡಿ 484 ಫಲಾನುಭವಿಗಳಿಗೆ 2.41 ಕೋಟಿ ರು. ಬ್ಯಾಂಕ್‌ ಸಾಲ ವಿತರಿಸಲಾಗಿದೆ ಎಂದು ಹೇಳಿದರು.ಸ್ವಾಭಿಮಾನದ ಬದುಕಿಗೆ ಬಲ ನೀಡುವ ಆಶಯದೊಂದಿಗೆ ಸ್ವನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಜತೆಗೆ ಮುದ್ರಾ ಯೋಜನೆ, ವಿಶ್ವ ಕರ್ಮ ಯೋಜನೆ ಸಹಿತ ವಿವಿಧ ಸ್ವರೂಪದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಯುವಕರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿಕೊಟ್ಟಿದ್ದಾರೆ ಎಂದು ನಳಿನ್‌ ಕುಮಾರ್‌ ಹೇಳಿದರು.ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವನಿಧಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಮತ್ತಷ್ಟು ಮಂದಿಗೆ ಇದರ ಲಾಭ ಸಿಗುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.ಶಾಸಕರಾದ ವೇದವ್ಯಾಸ ಕಾಮತ್‌, ಡಾ.ವೈ. ಭರತ್‌ ಶೆಟ್ಟಿ, ಉಪಮೇಯರ್‌ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮಾಜಿ ಮೇಯರ್‌ ಎಂ.ಶಶಿಧರ ಹೆಗ್ಡೆ, ಪಾಲಿಕೆಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್‌ ಅಮೀನ್‌, ವರುಣ್‌ ಚೌಟ, ಭರತ್‌ ಕುಮಾರ್‌, ಗಣೇಶ್‌ ಕುಲಾಲ್‌, ಪಾಲಿಕೆ ಉಪ ಆಯುಕ್ತ ರವಿಕುಮಾರ್‌, ಪ್ರಮುಖರಾದ ಕವಿತಾ, ಪ್ರದೀಪ್‌ ಡಿಸೋಜ, ಮಾಲಿನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ