ಶಿರಸಿ: ಶ್ರೀ ಮಠದ ಅಂಗ ಸಂಸ್ಥೆಯಾದ ಬೆಂಗಳೂರಿನ ಶ್ರೀ ಸ್ವಾನಂದಾಶ್ರಮದ ಗಣೇಶ ಸಂಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೊಯ್ಸಳ ಶೈಲಿಯ ಭವ್ಯ ದೇವಾಲಯದ ಪ್ರಥಮ ಹಂತದ ಲೋಕಾರ್ಪಣೆಯನ್ನು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನೆರವೇರಿಸಿದರು.
ಬೆಳಗ್ಗೆ ಕರ್ಕ ಲಗ್ನದ ಶುಭ ಮುಹೂರ್ತದಲ್ಲಿ ವೇದಘೋಷ, ಮಂತ್ರೋಚ್ಚಾರಣೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳ ಮಧ್ಯೆ ಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ರಚಿಸಿದ ಗಣಪತಿಯ ಸ್ತುತಿಸುವ ಶ್ಲೋಕಗಳನ್ನು ಸಮರ್ಪಿಸಿದರು.
ಬಳಿಕ ಆಶ್ರಮದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಕ್ತಿ, ಧರ್ಮ ಹಾಗೂ ಭಾರತೀಯ ಶಿಲ್ಪಕಲೆಯ ಮಹತ್ವವನ್ನು ವಿವರಿಸಿದರು. ಹೊಯ್ಸಳ ಶೈಲಿಯ ಈ ದೇವಾಲಯವು ಸಮಾಜಕ್ಕೆ ಶಾಂತಿ, ಸೌಹಾರ್ದ ಹಾಗೂ ಆಧ್ಯಾತ್ಮಿಕ ಚೈತನ್ಯ ನೀಡುವ ಕೇಂದ್ರವಾಗಲಿ ಎಂದು ಹಾರೈಸಿದರು.ಎಲ್ಲರೂ ದೇವಸ್ಥಾನಗಳಿಗೆ ಹೋಗುವ ಹಾಗೆ ಆಗಲಿ. ವಿಶೇಷವಾಗಿ ಇಂದಿನ ಮಕ್ಕಳಿಗೆ ತಮ್ಮ ಪಾಲಕರು ದೇವಸ್ಥಾನಗಳನ್ನು ತೋರಿಸಿ ಚಿಕ್ಕಂದಿನಿಂದಲೇ ದೇವರ ಮೇಲೆ ಶ್ರದ್ಧಾ-ಭಕ್ತಿಗಳು ಜಾಗ್ರತವಾಗುವ ಹಾಗೆ ಮಾಡಿ ಎಂದು ನುಡಿದರು.
ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.