ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇದೇ ಮೊದಲ ಬಾರಿಗೆ ತೆರಿಗೆದಾರರನ್ನು ಗೌರವಿಸುವ ವಿನೂತನ ಕಾರ್ಯವನ್ನು ಪಾಲಿಕೆ ಆಡಳಿತ ನಡೆಸಿತು. ಏ.1 ರಂದು ಪಾಲಿಕೆಯ ವಲಯ ಕಚೇರಿಗಳನ್ನು ಹೂವು, ತಳಿರು – ತೋರಣಗಳಿಂದ ಸಿಂಗರಿಸಲಾಗಿತ್ತು. ತೆರಿಗೆ ಪಾವತಿಸಲು ಆಗಮಿಸಿದ ನಾಗರಿಕರನ್ನು ಕಚೇರಿ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.
ಕಚೇರಿಗಳಲ್ಲಿ ವಿಶೇಷವಾಗಿ ಸಿದ್ದಪಡಿಸಿದ ಆಸನದಲ್ಲಿ ಕುಳ್ಳರಿಸಿ, ಸಕಾಲದಲ್ಲಿ ಕಂದಾಯ ಪಾವತಿ ಮಾಡುತ್ತಿರುವ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಸದರಿ ತೆರಿಗೆದಾರರಿಗೆ ಲಾಡು ವಿತರಿಸಿದರು. ‘ಮಾದರಿ ನಾಗರಿಕ’ ಎಂಬ ಬಿರುದು ಒಳಗೊಂಡ, ಆಯುಕ್ತರು ಸಹಿ ಮಾಡಿದ ಅಭಿನಂದನಾ ಪತ್ರ ನೀಡಿ ಗೌರವಸಿದರು.ಇದೇ ಮೊದಲ ಬಾರಿಗೆ ಪಾಲಿಕೆ ವಲಯ ಕಚೇರಿಗಳಲ್ಲಿ ಮಾಡಿದ್ದ ಈ ವಿಶೇಷ ವ್ಯವಸ್ಥೆಯು, ಕಂದಾಯ ಪಾವತಿ ಮಾಡಲು ಆಗಮಿಸಿದ ನಾಗರಿಕರಲ್ಲಿ ಅಚ್ಚರಿಯ ಜೊತೆಗೆ ಸಂತಸ ಉಂಟು ಮಾಡಿತು.
ನಾಗರಿಕರು ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿ ನಗರದ ಅಭಿವೃದ್ದಿಗೆ ಕೈಜೋಡಿಸಬೇಕು. ತೆರಿಗೆ ಪಾವತಿ ಬಗ್ಗೆ ಜಾಗೃತಿ ಮೂಡಿಸಲು, ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಹಾಗೂ ನಾಗರಿಕರ ಗಮನ ಸೆಳೆಯುವ ಉದ್ಧೇಶದಿಂದ, ಹಣಕಾಸು ವರ್ಷ ಆರಂಭದ ಮೊದಲ ದಿನವಾದ ಏ.1 ರಂದು ತೆರಿಗೆ ಪಾವತಿ ಮಾಡಲು ಆಗಮಿಸುವ ನಾಗರಿಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.
ಏಪ್ರಿಲ್‌ನಲ್ಲಿ ತೆರಿಗೆ ಪಾವತಿಸಿದರೆ ಶೇ.5 ರಿಯಾಯ್ತಿ!