ಸಿದ್ಧಗಂಗಾ ಮಠವು ಬಸವಣ್ಣನವರ ಆದರ್ಶಗಳನ್ನು ಅನುಸರಿಸುತ್ತಿದೆ. ತಾರತಮ್ಯದ ಸಾಮಾಜಿಕ ವ್ಯವಸ್ಥೆ ಮತ್ತು ಸಾರ್ವತ್ರಿಕ ಭಾಗವಹಿಸುವಿಕೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಮಠ, ಪ್ರಜಾಪ್ರಭುತ್ವ ವ್ಯವಸ್ಥೆಯ ಕೈಗನ್ನಡಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ಧಗಂಗಾ ಮಠವು ಬಸವಣ್ಣನವರ ಆದರ್ಶಗಳನ್ನು ಅನುಸರಿಸುತ್ತಿದೆ. ತಾರತಮ್ಯದ ಸಾಮಾಜಿಕ ವ್ಯವಸ್ಥೆ ಮತ್ತು ಸಾರ್ವತ್ರಿಕ ಭಾಗವಹಿಸುವಿಕೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಮಠ, ಪ್ರಜಾಪ್ರಭುತ್ವ ವ್ಯವಸ್ಥೆಯ ಕೈಗನ್ನಡಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದ್ದಾರೆ.ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದಯವೇ ಧರ್ಮದ ಮೂಲವಯ್ಯ’ ಎಂಬ ಬಸವಣ್ಣನವರ ಆಶಯದಂತೆ ಸಿದ್ದಗಂಗಾ ಮಠವು ಎಲ್ಲಾ ಸಮುದಾಯದ, ಎಲ್ಲಾ ಜನವರ್ಗಗಳಿಗೆ ಅನ್ನ, ಅಕ್ಷರ, ಆಶ್ರಯದ ಮೂಲ ಮಂತ್ರದೊಂದಿಗೆ ಸಂಸ್ಕಾರವನ್ನು ನೀಡುತ್ತಿದೆ. ಎಲ್ಲಾ ನಂಬಿಕೆಗಳ ಆಧಾರ ಕರುಣೆ. ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಇಡೀ ಪ್ರಪಂಚದ ಬಗ್ಗೆ ಪ್ರೀತಿ ಮತ್ತು ಕರುಣೆಯ ಭಾವನೆ ಇರಬೇಕು. ಈ ನಿಟ್ಟಿನಲ್ಲಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ। ಶಿವಕುಮಾರ ಸ್ವಾಮೀಜಿ ಅವರು ಶತಾಯುಷಿಗಳಾಗಿ ಹಲವು ವರ್ಷ ತಮ್ಮ ಆಧ್ಯಾತ್ಮಿಕ ಚಟುವಟಿಕೆಯಿಂದ ಮಾನವೀಯತೆಯನ್ನು ಶ್ರೀಮಂತಗೊಳಿಸಿದ್ದರು. ಬಡವರು ಹಾಗೂ ದುರ್ಬಲರ ಸೇವೆಗೆ ತಮ್ಮ ಇಡೀ ಆಯುಷ್ಯವನ್ನು ಮುಡಿಪಾಗಿಟ್ಟಿದ್ದರು. ರಾಷ್ಟ್ರ ನಿರ್ಮಾಣ, ಲೋಕೋಪಕಾರ ಮತ್ತು ಕರ್ತವ್ಯ ನಿಷ್ಠೆಯ ಮಾರ್ಗವನ್ನು ಅನುಸರಿಸಿದರೆ ಮಾತ್ರ ನಾವು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಹೇಳಿದರು. ಕುವೆಂಪು ವಿರಚಿತ ನಾಡ ಗೀತೆಗೆ ಮುರ್ಮು ನಮನ:‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ ರಚನೆಗೆ 150 ವರ್ಷಗಳು ಸಂದಿದ್ದು, ದೇಶಾದ್ಯಂತ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಕುವೆಂಪು ಅವರ ಗೀತೆಯನ್ನು ನೆನಪಿಸಿಕೊಳ್ಳಬೇಕು. ಅವರು ಗೀತೆಯಲ್ಲಿ ಕರ್ನಾಟಕ ಮಾತೆಯನ್ನು ಭಾರತ ಮಾತೆಯ ಮಗಳು ಎಂದು ವರ್ಣಿಸಿದ್ದಾರೆ. ‘ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಆ ಅಮರವಾಣಿಯು ದೇಶ ವಾಸಿಗಳ ಹೃದಯದಲ್ಲಿ ಕರ್ನಾಟಕದ ಬಗ್ಗೆ ಹಾಗೂ ರಾಷ್ಟ್ರೀಯ ಏಕತೆಯ ಬಗ್ಗೆ ಇರುವ ಹೆಮ್ಮೆಯ ಭಾವನೆಯನ್ನು ಜಾಗೃತಗೊಳಿಸುತ್ತದೆ. ಈ ಗೀತೆ ಭಾರತೀಯ ಮೌಲ್ಯಗಳ ಸಮಗ್ರತೆ ಮತ್ತು ಔದಾರ್ಯದ ವಿವರಣೆಯನ್ನು ಒದಗಿಸುತ್ತದೆ. ಇದೇ ಭಾರತೀಯ ಮೌಲ್ಯಗಳು ಲಿಂಗೈಕ್ಯ ಶ್ರೀಗಳ ಅಸಾಧಾರಣ ಕೊಡುಗೆಯಲ್ಲಿಯೂ ಪ್ರತಿಫಲಿಸುತ್ತವೆ ಎಂದು ದ್ರೌಪದಿ ಮುರ್ಮು ಹೇಳಿದರು.ಶ್ರೀಗಳ ಜಯಂತಿ ಸಂಭ್ರಮಾಚರಣೆ:
ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ। ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಿದ್ಧಗಂಗಾ ಮಠದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಜಯಂತಿಗೆ ವಿವಿಧ ಮಠಾಧೀಶರು, ಹರಗುರುಚರ ಮೂರ್ತಿಗಳು, ಕೇಂದ್ರ ಸಚಿವ ವಿ.ಸೋಮಣ್ಣ, ಪ್ರಹ್ಲಾದ್ ಜೋಷಿ, ಡಾ। ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹಸ್ರಾರು ಭಕ್ತಗಣ ಸಾಕ್ಷಿಯಾದರು.
ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರ, ಶ್ರೀಗಳ ಗದ್ದುಗೆಯನ್ನು ಹೂವು, ಹಣ್ಣುಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ಧಾರ್ಮಿಕ ವಿಧಿ-ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು. ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು.ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ನಸುಕಿನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿ, ಪರಮ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸುವ ಮೂಲಕ ಆಶೀರ್ವಾದ ಪಡೆದರು. ಬಳಿಕ, 8 ಗಂಟೆಗೆ ಗದ್ದುಗೆ ಮಂದಿರದ ಮುಂಭಾಗದಿಂದ ಆರಂಭವಾದ ಶ್ರೀಗಳ ಕಂಚಿನ ಪುತ್ಥಳಿ ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆಗೆ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಇದೇ ವೇಳೆ, 1 ಲಕ್ಷಕ್ಕೂ ಅಧಿಕ ಮಂದಿ ಭಕ್ತಾದಿಗಳಿಗೆ 6 ಕಡೆ ವಿಶೇಷ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.ಶಿವಕುಮಾರ ಶ್ರೀಗಳ ಸೇವೆ ಅನನ್ಯ:
ತ್ರಿವಿಧ ದಾಸೋಹಿ, ಕಾಯಕ ಯೋಗಿ ಡಾ। ಶಿವಕುಮಾರ ಸ್ವಾಮೀಜಿಯವರ ಸೇವೆ ಅನನ್ಯವಾದುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.ಸಿದ್ಧಗಂಗಾ ಮಠದಲ್ಲಿ ನಡೆದ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿದ್ಧಗಂಗಾ ಮಠವು ಜಾತಿ, ಧರ್ಮ ಮೀರಿ ಎಲ್ಲ ವರ್ಗದ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನ ಹಾಗೂ ವಸತಿ ದಾಸೋಹ ನೀಡಿ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಶಿವಕುಮಾರ ಸ್ವಾಮೀಜಿ ಅವರು ದೇಶದ ಮಠಾಧೀಶರಲ್ಲೇ ಅನ್ನ ದಾಸೋಹ, ಅಕ್ಷರ ದಾಸೋಹ ಹಾಗೂ ವಸತಿ ದಾಸೋಹ ನೀಡುವಲ್ಲಿ ಮೇಲ್ಪಂಕ್ತಿಯಲ್ಲಿದ್ದಾರೆ ಎಂದರು.ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಯವರು ಮಠವನ್ನು ಮುನ್ನಡೆಸುತ್ತಿದ್ದು, ಇಂದಿಗೂ ಸಹ 10 ಸಾವಿರ ಬಡ ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿರುವುದು ಕ್ಷೇತ್ರದ ಮಹಿಮೆಯನ್ನು ಎತ್ತಿ ತೋರಿಸುತ್ತದೆ ಎಂದರು.---ದೇವಲೋಕಕ್ಕೆ ಬಂದ ಅನುಭವಸಿದ್ಧಗಂಗಾ ಮಠ, ಆಧುನಿಕ ಸಂಸ್ಕಾರದ ಕೇಂದ್ರ. ಈ ಮಠಕ್ಕೆ ಬಂದಾಗ ದೇವಲೋಕಕ್ಕೆ ಬಂದ ಅನುಭವವಾಗುತ್ತದೆ. ಶಿವಕುಮಾರ ಸ್ವಾಮೀಜಿಯವರು ಮಹಾನ್ ಸಂತರು. ಬಡವರ ಹಸಿವಿನ ನೋವನ್ನು ಅರ್ಥೈಸಿಕೊಂಡು ಅನಾಥ ಮಕ್ಕಳಿಗೆ ಅಪ್ಪನಾಗಿ ಸಾಕಿ ಸಲಹಿದ್ದಾರೆ.-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ.---ವಿಶ್ವವೇ ತಿರುಗಿ ನೋಡುವ ಸೇವೆಇಡೀ ವಿಶ್ವವೇ ಸಿದ್ಧಗಂಗಾ ಮಠದತ್ತ ತಿರುಗಿ ನೋಡುವಂತಹ ಸೇವೆಯನ್ನು ಶಿವಕುಮಾರ ಸ್ವಾಮೀಜಿಗಳು ಮಾಡಿದ್ದಾರೆ. ಇಂದು ಶ್ರೀಗಳ ಭೌತಿಕ ಶರೀರ ಅಳಿದಿರಬಹುದು. ಆದರೆ, ಅವರ ಚಿಂತನೆಗಳು, ಸೇವೆ ಸದಾ ನಮ್ಮೊಂದಿಗೆ ಜಾಗೃತವಾಗಿರುತ್ತವೆ.-ವಿ.ಸೋಮಣ್ಣ, ಕೇಂದ್ರ ಸಚಿವ.