ಮಹೇಶ ಛಬ್ಬಿ
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಅದು ಯಶಸ್ವಿಯಾದಲ್ಲಿ ಜಿಲ್ಲೆಯೇ ಶೈಕ್ಷಣಿಕ ಫಲಿತಾಂಶ ಬದಲಾವಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗದಗ ತಾಪಂ ಕಾರ್ಯಾಲಯ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಮಹತ್ತರ ಹೆಜ್ಜೆಯನ್ನಿಟ್ಟಿದ್ದು, ಸಮುದಾಯದ ಪಾತ್ರ ಅಗತ್ಯವಾಗಿದೆ.
ಪ್ರತಿ ಗ್ರಾಮಗಳಲ್ಲಿ ಸಂಜೆ 7ರಿಂದ ರಾತ್ರಿ 9ರ ವರೆಗೆ ಪ್ರತಿಯೊಬ್ಬರ ಮೊಬೈಲ್‌ಗಳು, ಪ್ರತಿ ಮನೆಯ ಟಿವಿಗಳು ಸ್ವಿಚ್ ಆಫ್ ಮಾಡುವಂತೆ ಮತ್ತು ಗ್ರಾಮಗಳಲ್ಲಿ ಶಬ್ದಮಾಲಿನ್ಯವಾಗದಂತೆ ಟ್ರ್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಂಚಾರ ಮಾಡದಂತೆ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗದಗ ತಾಪಂ ಕಾರ್ಯಾಲಯಕ್ಕೆ ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಈ ಬಗ್ಗೆ ಡಂಗೂರ ಸಾರಲು ಕ್ರಮ ವಹಿಸಬೇಕೆಂದು ಮನವಿ ಸಲ್ಲಿಸಿದೆ.ಮಕ್ಕಳ ಓದಿಗೆ ಹಲವು ಅಡಚಣೆ: ಮಕ್ಕಳು ಓದಿಗೆ ಹಲವಾರು ಅಡಚಣೆಗಳು ಎದುರಾಗುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ. ಮೊಬೈಲ್ ಹಾಗೂ ಡಿಜಿಟಲ್ ಮಾಧ್ಯಮಗಳ ಅತಿಯಾದ ಬಳಕೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನೇ ಕಡಿಮೆಯಾಗಿಸಿ, ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮನೆಗಳಲ್ಲಿ ಪಾಲಕರು ಸಂಜೆ ಮಕ್ಕಳು ಓದುವ ಸಮಯದಲ್ಲಿ ಟಿವಿಗಳಲ್ಲಿ ಧಾರಾವಾಹಿ, ಮೊಬೈಲ್‌ಗಳಲ್ಲಿ ರೀಲ್ಸ್, ಯುಟ್ಯೂಬ್ ನೋಡುತ್ತಾ ಕುಳಿತುಕೊಂಡಿರುತ್ತಾರೆ, ಮಕ್ಕಳ ಗಮನ ಓದುವುದನ್ನು ಬಿಟ್ಟು, ಮೊಬೈಲ್, ಟಿವಿಗಳ ಮೇಲೆ ಬೀಳುತ್ತಿದೆ. ಇದರಿಂದ ಮಕ್ಕಳು ದೀರ್ಘಕಾಲ ಏಕಾಗ್ರತೆಯಿಂದ ಓದುವ ಅಭ್ಯಾಸವನ್ನು ಕಳೆದುಕೊಳ್ಳುತ್ತಿದ್ದಾರೆ.
ಸಮುದಾಯದ ಸಹಕಾರ ಅಗತ್ಯ: ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯೋಜಿಸಿದ ಹೊಸತೊಂದು ಪ್ರಯತ್ನ ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿದೆ. ಗ್ರಾಮಗಳಲ್ಲಿ ಸಂಜೆ 7ರಿಂದ 9ರ ವರೆಗೆ ಪ್ರತಿಯೊಬ್ಬರ ಮೊಬೈಲ್ ಫೋನ್‌ಗಳು, ಪ್ರತಿ ಮನೆಯ ಟಿವಿಗಳು ಸ್ವೀಚ್ ಆಫ್ ಮಾಡುವಂತೆ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಸಂಚಾರ ಮಾಡದಂತೆ ಮನವಿಗೆ ಜನರು ಸ್ಪಂದಿಸಿ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಭಾವಿ ಭವಿಷ್ಯತ್ತಿಗಾಗಿ ಕೈಜೋಡಿಸಬೇಕು. ಅಂದಾಗ ಪ್ರಯತ್ನಕ್ಕೆ ಪ್ರತಿಫಲ ದೊರೆಯುತ್ತಿದೆ ಎನ್ನುತ್ತಾರೆ ಶಿಕ್ಷಕರು.ಮಹತ್ವದ ಘಟ್ಟ: ಮಾರ್ಚ್ ತಿಂಗಳಿನಿಂದ ಎಸ್ಸೆಸ್ಸೆಲ್ಸಿ ಮಕ್ಕಳು ಸೇರಿದಂತೆ ಇತರೆ ತರಗತಿಗಳ ಪರೀಕ್ಷೆಗಳು ಸಹ ನಡೆಯಲಿದ್ದು, ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟದಲ್ಲಿ ಅವರು ಏಕಾಗ್ರತೆಯಿಂದ ಅಭ್ಯಾಸ ಮಾಡಲು ಗ್ರಾಮದಲ್ಲಿ ಪ್ರಶಾಂತವಾದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡದೆ ಅವರ ಓದಿಗೆ ಹೆಚ್ಚಿನ ಒತ್ತು ಕೊಡಬೇಕು. ಗ್ರಾಮದ ಪ್ರತಿಯೊಬ್ಬರು ಈ ಮನವಿಗೆ ಸ್ಪಂದಿಸಿ ಮಕ್ಕಳ ಓದಿಗೆ ತೊಂದರೆಯಾಗದಂತೆ ಸಹಕರಿಸಬೇಕು ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ತಿಳಿಸಿದರು.ಶೈಕ್ಷಣಿಕ ವಿಕಾಸ: ಮನೆಮಟ್ಟದಲ್ಲಿಯೂ ಮಕ್ಕಳ ಓದಿಗೆ ಅಗತ್ಯವಾದ ಪ್ರೋತ್ಸಾಹವಿಲ್ಲ. ಪೋಷಕರು ತಮ್ಮ ದೈನಂದಿನ ವ್ಯವಸ್ಥೆಯಲ್ಲಿ ಮಕ್ಕಳ ಓದಿಗೆ ಸಮಯ ನೀಡಲಾಗದೆ, ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ವಿಫಲರಾಗುತ್ತಿದ್ದಾರೆ. ಮಕ್ಕಳ ಮುಂದೆ ಪೋಷಕರೇ ಓದುವ ಮಾದರಿಯನ್ನು ತೋರಿಸದಿದ್ದರೆ, ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಯುವುದು ಕಷ್ಟಕರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮನವಿಗೆ ಸ್ಪಂದನೆ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಸಹಕರಿಸಬೇಕು ಎಂದು ತಾಪಂ ಇಒ ಮಲ್ಲಯ್ಯ ಕೆ. ತಿಳಿಸಿದರು.