ಗಣೇಶ್ ಕಾಮತ್ ಮೂಡುಬಿದಿರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆದ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2025-26’ ನ ನಾಲ್ಕನೇ ದಿನವಾದ ಗುರುವಾರ ಕ್ರೀಡಾಭಿಮಾನಿಗಳಿಗೆ ಸಾರ್ಥಕತೆ, ಸಂಭ್ರಮದ ಕ್ಷಣ. ರಾಜ್ಯದಲ್ಲೇ ಅತ್ಯಂತ ಉನ್ನತ ಮಟ್ಟದ ನಿರ್ವಹಣೆಯೊಂದಿಗೆ ನಂ1 ಸ್ಥಾನದಲ್ಲಿರುವ ಇಲ್ಲಿನ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣ ಗುರುವಾರಕ್ಕೆ ಹನ್ನೆರಡು ವರ್ಷವಾಯಿತು. ಅಚ್ಚುಕಟ್ಟಾದ ಮೂಲಸೌಕರ್ಯ, ಆತಿಥ್ಯ ವ್ಯವಸ್ಥೆಗಳ, ಶಿಸ್ತುಬದ್ಧತೆ, ಸಾಂಸ್ಕೃತಿಕ ಸ್ಪರ್ಶವೇ ಮೊದಲಾದ ಅದ್ಧೂರಿತನದೊಂದಿಗೆ ಗುರುತಿಸಿಕೊಂಡ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಸಂಭ್ರಮದ ನಡುವೆ ಈ ಕ್ರೀಡಾಂಗಣ ಹನ್ನೊಂದು ವರ್ಷ ಪೂರೈಸಿರುವುದು ಕ್ರೀಡಾಪಟುಗಳಿಗೆ, ವಿಶೇಷವಾಗಿ ಕ್ರೀಡಾಭಿಮಾನಿಗಳಿಗ ಸಂತಸಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ತಾಲೂಕು ಮಟ್ಟದಲ್ಲಿ ಏಕೈಕ ಎನ್ನಬಹುದಾದ ಈ ಸಿಂಥೆಟಿಕ್ ಟ್ರ್ಯಾಕ್ ಅತ್ಯಂತ ಯಶಸ್ವೀ ನಿರ್ವಹಣೆಯಿಂದಾಗಿ ಗಮನ ಸೆಳೆದಿದೆ. ಆ ಕಾರಣದಿಂದಾಗಿಯೇ ಕಳೆದ ಹನ್ನೊಂದು ವರ್ಷದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕೂಟದ ಮೂಲಕವೇ ಉದ್ಘಾಟನೆಗೊಂಡ ಈ ಟ್ರ್ಯಾಕ್ ಈಗಾಗಲೇ ದಾಖಲೆಯ ಆರು ರಾಷ್ಟ್ರೀಯ ಅಂತರ್ ವಿವಿ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಿದೆ ಎನ್ನುವುದು ಗಮನಾರ್ಹ. ತನ್ನ ಅನನ್ಯ ಕ್ರೀಡಾಸಕ್ತಿಯಿಂದ ಎಂಭತ್ತರ ದಶಕದಲ್ಲೇ ಏಕಲವ್ಯ ಕ್ರೀಡಾ ಕ್ಲಬ್ ಕಟ್ಟಿಕೊಂಡ ಡಾ. ಎಂ. ಮೋಹನ ಆಳ್ವ ತಮ್ಮ ಸಂಸ್ಥೆಗಳ ಜತೆ ಕ್ರೀಡಾ ಉತ್ಸಾಹವನ್ನೂ ಬೆಳೆಸಿಕೊಂಡು ಎಂಟುನೂರಕ್ಕೂ ಅಧಿಕ ಕ್ರೀಡಾಪಟುಗಳಿಗೆ ದತ್ತು ಪಡೆದು ಪ್ರೋತ್ಸಾಹಿಸುತ್ತಿರುವುದರಿಂದ ಈ ಟ್ರ್ಯಾಕ್ ನಲ್ಲಿ ಕ್ರೀಡಾಚಟುವಟಿಕೆ ನಿತ್ಯವೂ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಸ್ಥಳೀಯ ಶಾಸಕರಾಗಿದ್ದ ಕ್ರೀಡಾಭಿಮಾನಿ ಕೆ. ಅಭಯಚಂದ್ರ ಜೈನ್ ಕ್ರೀಡಾ ಸಚಿವರಾದದ್ದು ತನ್ನ ಅವಧಿಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸಹಿತ ಕ್ರೀಡಾ ಪರಿಕರ, ವ್ಯವಸ್ಥಿತ ಈಜುಕೊಳವೇ ಮೊದಲಾದ ಸರ್ವ ಸೌಲಭ್ಯ ಒದಗಿಸಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟ: ಆಳ್ವರೇ ಸಾಟಿ ಓಟ ಮುಗಿದು ಕಣ್ಣು ಮಿಟಿಕಿಸುವುದರೊಳಗೆ ಬೃಹತ್ ಪರದೆಯಲ್ಲಿ ಫಲಿತಾಂಶ, 0.001 ಸೆಕೆಂಡು ಸಮಯ, 0.001 ಮಿಲಿ ಮೀಟರ್ ಅಂತರವೂ ನಿಖರ ದಾಖಲು, ಐದು ಸಾವಿರದಷ್ಟು ಅಥ್ಲೀಟ್‌ಗಳ ಸವಿವರ, ಹೀಗೆ ಸೂಕ್ಷ್ಮತೆ, ನಿಖರತೆ, ಇಂಟರ್ ನ್ಯಾಷನಲ್ ಮಾನದಂಡ ದೃಢೀಕರಿತ ಗುಣಮಟ್ಟ, ಮೂಲ ಸೌಕರ್ಯ, ಪಾರದರ್ಶಕತೆಗಳೆಲ್ಲ ಈ ಕ್ರೀಡಾಕೂಟದಲ್ಲಿ ಕಾಣುತ್ತಿವೆ. ರೆಕೊಗ್ನೈಸ್ಡ್ ಫೋಟೋ ಫಿನಿಶಿಂಗ್ ಟೆಕ್ನಾಲಜಿ’ ತಂತ್ರಜ್ಞಾನದ ಮೂಲಕ ನಿಖಾರತಿನಿಖರ ಫಲಿತಾಂಶ ದಾಖಲಾಗುತ್ತಿದ್ದರೆ, ಸಂವೇದಿ (ಸೆನ್ಸಾರ್) ಸಿಸ್ಟಮ್ ಕ್ಯಾಮೆರಾದ ಲೈವ್ ಆ್ಯಂಡ್ ರೆಕಾರ್ಡಿಂಗ್ ಚಿತ್ರೀಕರಣವು ಪಾರದರ್ಶಕ ದಾಖಲೆಗಳನ್ನು ನೀಡುತ್ತಿದೆ. ಪ್ರತಿ ಅಥ್ಲೀಟ್ ಮಾಹಿತಿಯೂ ಆನ್‌ಲೈನ್ ಮೂಲಕವೇ ಕ್ರೀಡಾಕೂಟಕ್ಕಾಗಿ ರೂಪಿಸಿದ ಅತ್ಯಾಧುನಿಕ ಸಾಫ್ಟ್ವೇರ್ ಡಾಟಾಬೇಸ್‌ನಲ್ಲಿ ನೋಂದಣಿಯಾಗಿದ್ದು, ಕ್ರೀಡಾಂಗಣದಲ್ಲಿ ಹಾಕಲಾದ ಬೃಹತ್ ಪರದೆಯಲ್ಲಿ ಕ್ಷಣದೊಳಗೆ ಮೂಡುತ್ತದೆ.
ರಾಷ್ಟ್ರೀಯ ಕ್ರೀಡಾಕೂಟವೊಂದನ್ನು ಆಯೋಜಿಸಲು ವಿಶ್ವ ಅಥ್ಲೆಟಿಕ್ಸ್ ಒಕ್ಕೂಟ ( ಡಬ್ಲ್ಯು ಎ.ಎಫ್) ಪ್ರಮಾಣೀಕೃತ, ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ (ಐಎಎಫ್) ದ ಮಾನ್ಯತೆ ನೀಡುವ ಗುಣಮಟ್ಟ ಇರಲೇಬೇಕು. ಆದರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ನೇತೃತ್ವದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಕಲ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಒದಗಿಸಿದ್ದು ಮಾದರಿಯಾಗಿದೆ. ಇನ್ನೊಂದೆಡೆ ಸಂಪೂರ್ಣ ಕ್ರೀಡೆಯ ಉಸ್ತುವಾರಿಯನ್ನು ಒಲಿಂಪಿಕ್ ಅರ್ಹತೆಯ ವೀಕ್ಷಕರು ಪರಿಶೀಲಿಸುತ್ತಿರುವುದು ವಿಶೇಷ.2003ರಲ್ಲಿ ಏರು ತಗ್ಗಿನ ಮೈದಾನವನ್ನು ಸಮತಟ್ಟುಗೊಳಿಸಿ71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗಿತ್ತು.
ಅಂತಾರಾಷ್ಟ್ರೀಯ ಕ್ರೀಡಾ ಕೂಟದ ಕನಸಿದೆ: ಡಾ. ಆಳ್ವನಮ್ಮ ಕನಸಿನ ಸಿಂಥೆಟಿಕ್ ಟ್ರ್ಯಾಕ್ ಹನ್ನೊಂದು ವರ್ಷ ಪೂರೈಸಿರುವ ಸಂದರ್ಭದಲ್ಲೇ ರಾಷ್ಟ್ರೀಯ ಅಂತರ್ ವಿವಿ ಕ್ರೀಡಾ ಕೂಟ ನಡೆದಿರುವುದು ಅರ್ಥಪೂರ್ಣ. ಈಗಾಗಲೇ ಆರನೇ ಬಾರಿಗೆ ಇಂತಹ ಕ್ರೀಡಾಕೂಟ ನಡೆಸಿದ ತೃಪ್ತಿ ನಮ್ಮದು. ಈ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ, ದಕ್ಷಿಣ ಏಷ್ಯಾ ಮಟ್ಟದ ಕ್ರೀಡಾ ಕೂಟ ನಡೆಸಬೇಕು ಎನ್ನುವುದು ನನ್ನ ಕನಸು. ಕ್ರೀಡೆ ಎಂದರೆ ಕೇವಲ ಸ್ಪರ್ಧೆಯಲ್ಲ. ಅಲ್ಲಿ ನಿಖರತೆ, ಪಾರದರ್ಶಕತೆಗೆ ಹೆಚ್ಚಿನ ಪ್ರಾಶಸ್ತ್ಯ ಅಗತ್ಯ. ಭಾಗವಹಿಸುವ ಪ್ರತೀ ಅಥ್ಲೀಟ್‌ಗೆ ಅಂತಾರಾಷ್ಟ್ರೀಯ ಮಟ್ಟದ ಅನುಭವ ಮೂಡಬೇಕು ಎಂಬುದರ ಹಿನ್ನಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನನಾನು ಕ್ರೀಡಾ ಸಚಿವನಾಗಿದ್ಧಾಗ ತನ್ನ ಕ್ಷೇತ್ರ ಮೂಡುಬಿದಿರೆಯಲ್ಲಿ ಆಳ್ವರ ಸಾಧನೆ, ಸಾಮರ್ಥ್ಯ ಎಲ್ಲರಿಗೂ ತಿಳಿದಿದ್ದ ಕಾರಣ. ತಾಲೂಕು ಆಗಿರದ ಮೂಡುಬಿದಿರೆಗೆ ಸಿಂಥೆಟಿಕ್ ಟ್ರ್ಯಾಕ್ ತರಲು ಸಾಧ್ಯವಾಯಿತು. ಕ್ರೀಡಾ ಇಲಾಖೆಗೆ 28 ಎಕರೆ ಜಾಗವಿರುವ ಏಕೈಕ ನಿದರ್ಶನವಿದ್ದರೆ ಅದು ಮೂಡುಬಿದಿರೆ. ಹಾಗಾಗಿ ರಾಜ್ಯದಲ್ಲೇ ಹೋಬಳಿ ಮಟ್ಟದಲ್ಲಿ ಆಗ ಸಿಂಥೆಟಿಕ್ ಟ್ರ್ಯಾಕ್ ಕೊಡಿಸಿದ್ದು ಸಾರ್ಥಕವಾಗಿದೆ
- ಕೆ. ಅಭಯಚಂದ್ರ ಜೈನ್ ಮಾಜಿ ಕ್ರೀಡಾ ಸಚಿವನಾನು ರಾಷ್ಟ್ರೀಯ ಮಟ್ಟದಲ್ಲಿ ನೋಡಿರುವ ಅತ್ಯುತ್ತಮ ಸಿಂಥೆಟಿಕ್ ಟ್ರ್ಯಾಕ್ ಗಳ ಪೈಕಿ ಮೂಡುಬಿದಿರೆಯೂ ಒಂದು. ಇನ್ನಷ್ಟು ಪ್ರೇಕ್ಷಕರ ಗ್ಯಾಲರಿಗಳು, ಮೈದಾನದ ಎಲ್ಲ ಮೂಲೆಗಳಲ್ಲೂ ಶೌಚಾಲಯಗಳ ವ್ಯವಸ್ಥೆ, ಸೌಲಭ್ಯಗಳು ಈ ಮೈದಾನವನ್ನು ಉನ್ನತ ದರ್ಜೆಗೆ ಏರಿಸಲಿವೆ.
ಎ.ಎಲ್ ಮುತ್ತು - ಅಂತಾರಾಷ್ಟ್ರೀಯ ಕ್ರೀಡಾ ಉದ್ಘೋಷಕ