ಕನ್ನಡಪ್ರಭ ವಾರ್ತೆ ಹಾಸನ
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ, ಮಹಿಳೆಯರ ಘನತೆಗೆ ಕುಂದುಂಟಾಗುವಂತಹ ವೀಡಿಯೋಗಳು (ಮೀಮ್ಸ್ ಗಳು) ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ. ಈ ವಿಡಿಯೋಗಳನ್ನು ತಯಾರಿಸಿದವರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ನಿಂದ ಎಸ್ಪಿ ಮಹಮ್ಮದ್ ಸುಜೀತಾ ಅವರಿಗೆ ಮನವಿ ಸಲ್ಲಿಸಲಾಯಿತು.ಹಾಸನ ಜಿಲ್ಲೆಯಲ್ಲಿನ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ವಿಷಯವನ್ನು ಬಳಸಿಕೊಂಡು ಕಿಡಿಗೇಡಿಗಳು ವ್ಯಂಗ್ಯದ ವಿಡಿಯೋಗಳನ್ನು (ಮೀಮ್ಸ್ಗಳನ್ನು) ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಡಿಯೋಗಳು ಲೈಂಗಿಕ ಹಗರಣವನ್ನು ಗೌಣ ಮಾಡಿ, ಅತ್ಯಚಾರದಂತಹ ಅಪರಾಧವನ್ನು ಹಾಸ್ಯದ ಸರಕಾಗಿ ಬದಲಾಯಿಸುತ್ತಿವೆ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ, ಸಂತ್ರಸ್ತರನ್ನು ಲಘುವಾಗಿ ನೋಡುವುದಲ್ಲದೇ ಹಾಸನ ಜಿಲ್ಲೆಯ ಎಲ್ಲ ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವಂತಿವೆ.ಇದು ಸಂತ್ರಸ್ತರು ಮುಂದೆ ಬಂದು ತನಿಖಾಧಿಕಾರಿಗಳ ಎದುರು ಹೇಳಿಕೆ ನೀಡಲು ಹಿಂಜರಿಯುವಂತೆಯೂ ಮಾಡಬಹುದು ಎಂದರು.
ಕೂಡಲೇ ಅವುಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ಧ ಐಪಿಸಿ, ಐಟಿ ಕಾಯಿದೆಗಳ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಎಚ್ಚರಿಕೆಯನ್ನು ಮಾಧ್ಯಮಗಳ ಮೂಲಕ ನೀಡಬೇಕು, ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸ್ವಾಸ್ಥ್ಯ ಹಾಳುಮಾಡುವ ವಿಡಿಯೋಗಳನ್ನು ಸೈಬರ್ ವಿಭಾಗ ಕೂಡಲೇ ಹಂಚಿಕೆಯಾಗದಂತೆ ತಡೆಗಟ್ಟಬೇಕು ಎಂದು ಹೇಳಿದರು.ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ, ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ವಿ. ರಮೇಶ್ ಇತರರು ಉಪಸ್ಥಿತರಿದ್ದರು.