ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜ.3ರಂದು ದಾವಣಗೆರೆ ವಕೀಲರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಹೊರ ವರ್ಷದ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ತಮಗೆ ಅವಮಾನದ ಜತೆಗೆ ಜಾತಿ ನಿಂದನೆಯಾಗಿದೆ. ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆಯನ್ನೂ ಹಾಕಲಾಗಿದೆ ಎಂದರು.
ಅನೇಕ ವಕೀಲರು ಅಂದಿನ ಘಟನೆಗೆ ಸಾಕ್ಷಿಯಾಗಿದ್ದಾರೆ. ಹೊಸ ವರ್ಷದ ಸಮಾರಂಭದ ಅಂಗವಾಗಿ ನಾನು ಮಾತನಾಡುತ್ತಿದ್ದ ವೇಳೆ ಟಿ.ಆರ್.ಗುರುಬಸವರಾಜ, ಡಿ.ಆರ್.ಪ್ರಭಾಕರ, ಎಲ್.ಶ್ಯಾಮ್ ಬೆದರಿಕೆ ಹಾಕಿ, ನನಗೆ ಅವಮಾನಿಸಿದ್ದಾರೆ. ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.ಕಳೆದ ಎರಡೂವರೆ ದಶಕದಿಂದಲೂ ವಕೀಲಿ ವೃತ್ತಿ ಮಾಡಿಕೊಂಡು ಬಂದ ತಮ್ಮ ದೂರಿನ ವಿಚಾರದಲ್ಲೇ ಪೊಲೀಸ್ ಇಲಾಖೆ, ಅಧಿಕಾರಿಗಳು ಹೀಗೆ ವರ್ತಿಸಿದರೆ ಜನ ಸಾಮಾನ್ಯರ ಗತಿ ಏನು? ಸಾಮಾನ್ಯ ಜನರಿಗೆ ನ್ಯಾಯ ಸಿಗುವುದಾದರೂ ಹೇಗೆ ಸಾಧ್ಯ? ಹಿರಿಯ ವಕೀಲರೆ ರಾಜಿ ಮಾಡಿಸುವುದಾಗಿ ಹೇಳಿದ್ದರಿಂದ ನಾನು ದೂರು ನೀಡುವುದು ತಡವಾಗಿತ್ತು ಎಂದು ಸ್ಪಷ್ಟಪಡಿಸಿದರು.
ತಮಗೆ ಆದ ಅವಮಾನ, ಜಾತಿ ನಿಂದನೆ, ಪ್ರಾಣ ಬೆದರಿಕೆ, ಅವಾಚ್ಯ ನಿಂದನೆ ಮಾಡಿದವರ ವಿರುದ್ಧ ಎಸ್‌ಸಿ-ಎಸ್‌ಟಿ ಆಯೋಗ, ಮಾನವ ಹಕ್ಕುಗಳ ಆಯೋಗ, ನಾಗರೀಕ ಜಾರಿ ನಿರ್ದೇಶನಾಲಯಕ್ಕೂ ದೂರು ನೀಡಿದ್ದೇನೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.ವಕೀಲ ವೃತ್ತಿ ಮೂಲಕ ಜಿಲ್ಲಾದ್ಯಂತ. ರಾಜ್ಯಾದಂತ ಕಕ್ಷಿದಾರರ ಪರ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ತಮಗೆ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ನಿಂದಿಸಿದವರನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ನನ್ನ ಕಾನೂನು ಹೋರಾಟ ಮುಂದುವರಿಯುತ್ತದೆ. ಬಡಾವಣೆ ಠಾಣೆ ಇನ್ಸಪೆಕ್ಟರ್, ಎಸ್ಪಿ, ಐಜಿಪಿ, ಡಿಸಿ, ಜಿಲ್ಲಾ ಸತ್ರ ನ್ಯಾಯಾಧೀಶರು, ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳು, ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು, ಎಸ್‌ಸಿ-ಎಸ್‌ಟಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆಯುಕ್ತರಿಗೂ ದೂರು ನೀಡಿದ್ದು, ಈವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.
ಒಬ್ಬ ವಕೀಲನಾಗಿ ನ್ಯಾಯಮೂರ್ತಿಗಳ ಎದುರಿಗೆ ಕಾನೂನುಬದ್ಧ, ನ್ಯಾಯಯುತವಾದ ಮಾತುಗಳನ್ನಾಡಿದರೂ ಸಹಿಸದ ಮೇಲ್ಕಂಡ ವ್ಯಕ್ತಿಗಳು ನನಗೆ ತೊಂದರೆ ಮಾಡಿರುತ್ತಾರೆ. ಸಾಕ್ಷಿಯಾಗಿ ನ್ಯಾಯಮೂರ್ತಿಗಳು, ಹಲವಾರು ವಕೀಲರೂ ಇದ್ದಾರೆ. ಇದಲ್ಲದೇ ಪುನಾ ನನಗೆ ಬಂದು ಬೆದರಿಕೆ ಹಾಕಿರುತ್ತಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಯುವ ವಕೀಲರಾದ ಡಿ.ಸಿ.ಎಂ.ರಾಕೇಶ, ಲಕ್ಷ್ಮಣ್ ರಾಮಾವತ್, ಅಣ್ಣಪ್ಪ, ಎಸ್.ಎಂ.ಉಮೇಶ, ಎ.ರಾಕೇಶ ಇತರರು ಇದ್ದರು.