- ಹಾಸ್ಟೆಲ್ ಮಕ್ಕಳೆಂದರೇ ಬಿಟ್ಟಿ ಬಂದಿಲ್ಲ
- ಕೊಪ್ಪಳ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳ ಮತ್ತು ಭಾಗ್ಯನಗರ ವ್ಯಾಪ್ತಿಯಲ್ಲಿ ಇರುವ ರಾಜಕಾಲುವೆಯ ಒತ್ತುವರಿ ತೆರವು ಮಾಡಿ, ನೀರು ಸರಾಗ ಹೋಗುವುದಕ್ಕೆ ದಾರಿ ಮಾಡುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಸೂಚಿಸಿದರು.ಕೊಪ್ಪಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದನ್ನು ಕೂಡಲೇ ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಮಸ್ಯೆಯ ಶಾಶ್ವತ ಇತ್ಯರ್ಥಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಒತ್ತುವರಿಯನ್ನು ತೆರವು ಮಾಡಬೇಕು. ಡಿಸಿ ಕಚೇರಿಯಿಂದ ಹಿಡಿದು ಹಿರೇಹಳ್ಳದವರೆಗೂ ಒತ್ತುವರಿ ತೆರವು ಮಾಡಿ ನೀರು ಹೋಗುವುದಕ್ಕೆ ದಾರಿ ಮಾಡಿ ಎಂದು ಸೂಚಿಸಿದರು.
ಬಿಸಿಎಂ ತಾಲೂಕು ಅಧಿಕಾರಿಗಳ ಹಾಸ್ಟೆಲ್‌ಗಳಲ್ಲಿ ಬಿಸಿನೀರಿನ ಸಮಸ್ಯೆ ಇದೆ ಎಂದಾಗ ಶಾಸಕರು ಗರಂ ಆದರು. ಯಾಕೆ ಈ ಸಮಸ್ಯೆ ಇತ್ಯರ್ಥ ಮಾಡಿಲ್ಲ. ವಿದ್ಯಾರ್ಥಗಳಿಗೆ ಬಿಸಿ ನೀರು ಕೊಡುವುದನ್ನು ಕೂಡಲೇ ಪ್ರಾರಂಭಿಸಬೇಕು. ಅಷ್ಟೇ ಅಲ್ಲ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಒಳ್ಳೆಯ ಆಹಾರ ನೀಡಬೇಕು ಎಂದು ಸೂಚಿಸಿದರು.
ಇದಕ್ಕೆ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ. ಇರುವ ಹಾಸ್ಟೆಲ್‌ನಲ್ಲಿ ಮಾತ್ರ ಪ್ರವೇಶ ನೀಡಲು ಸಾಧ್ಯವಿದ್ದಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿ ಕೈಚಲ್ಲಿದರು. ಇದರಿಂದ ಆಕ್ರೋಶಗೊಂಡ ಶಾಸಕ ರಾಘವೇಂದ್ರ ಹಿಟ್ನಾಳ, ಅಷ್ಟಕ್ಕೆ ನಿಮ್ಮ ಕೆಲಸ ಮುಗಿಯಲ್ಲ. ವಿದ್ಯಾರ್ಥಿಗಳು ಹೆಚ್ಚಾದಾಗ ತಕ್ಷಣ ಪ್ರಸ್ತಾವನೆ ಕಳುಹಿಸಬೇಕು. ಅದನ್ನು ನಮ್ಮ ಗಮನಕ್ಕೆ ತಂದರೇ ಸರ್ಕಾರದಲ್ಲಿ ಹಾಸ್ಟೆಲ್ ಮಂಜೂರಾತಿಗೆ ಶ್ರಮಿಸಲು ಅನುಕೂಲವಾಗುತ್ತದೆ ಎಂದರು. ಈಗ ಆಗಿದ್ದು ಆಯಿತು, ಹಿಂದುಳಿದ ವರ್ಗಗಳ ಇಲಾಖೆಯ ಸಚಿವರು ನಮ್ಮವರೇ ಇದ್ದಾರೆ. ಇಂದೇ ಪ್ರಸ್ತಾವನೆ ಸಿದ್ಧ ಮಾಡಿ, ನಾಳೆ ಕೆಡಿಪಿ ಸಭೆಯಲ್ಲಿ ಸಚಿವರಿಗೆ ಸಲ್ಲಿಸಿ, ಅನುಮತಿ ಪಡೆದುಕೊಳ್ಳೋಣ ಎಂದರು.
ಜಿಪಂ ಡಿಎಸ್ ಮಲ್ಲಪ್ಪ ತೊದಲಬಾವಿ, ಕೊಪ್ಪಳ ನಗರಸಭೆ ಆಯುಕ್ತ ಗಣಪತಿ ಪಾಟೀಲ್, ತಹಸೀಲ್ದಾರ ವಿಠ್ಠಲ ಚೌಗಲಿ ಹಾಗೂ ತಾಪಂ ಇಒ ದುಂಡಪ್ಪ ತುರಾದಿ ಇದ್ದರು.