ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಕ್ಯಾ. ಬ್ರಿಜೇಶ್ ಚೌಟ ಭೇಟಿ

KannadaprabhaNewsNetwork |  
Published : Jun 19, 2024, 01:08 AM ISTUpdated : Jun 19, 2024, 01:09 AM IST
ಫೋಟೋ: ೧೮ಪಿಟಿಆರ್-ಬ್ರಿಜೇಶ್ ಚೌಟ ಸಂಸದ ಬ್ರಿಜೇಶ್ ಚೌಟ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಏಕಾದಶ ರುದ್ರ ಸೇವೆಯಲ್ಲಿ ಪಾಲ್ಗೊಂಡರು | Kannada Prabha

ಸಾರಾಂಶ

ಪಕ್ಷದ ಕಚೇರಿಗೆ ತೆರಳಿದ ಬಳಿಕ ಸಂಘದ ಕಾರ್ಯಾಲಯ ಪಂಚವಟಿಗೆ ತೆರಳಿ ಅಲ್ಲಿಂದ ಸಂಘದ ಹಿರಿಯ ಕಾರ್ಯಕರ್ತ ಬಿರ್ಮಣ್ಣ ಗೌಡ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು.

ಕನ್ನಡಪ್ರಭವಾರ್ತೆ ಪುತ್ತೂರು

ದ. ಕ. ಜಿಲ್ಲೆಯ ಸಂಸದರಾದ ಬಳಿಕ ಮೊದಲ ಬಾರಿಗೆ ಮಂಗಳವಾರ ಪುತ್ತೂರಿಗೆ ಆಗಮಿಸಿದ ಕ್ಯಾ. ಬ್ರಿಜೇಶ್ ಚೌಟ ಅವರು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಏಕಾದಶ ರುದ್ರ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದಲ್ಲಿ ಏಕಾದಶ ರುದ್ರ ಸೇವೆಯಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಸಂಸದರಿಗೆ ಶಾಲು ಹೊದಿಸಿ ಗೌರವಿಸಿದರು. ಬಳಿಕ ಸಂಸದರು ತಮ್ಮ ಕಾರ್ಯಕರ್ತರೊಂದಿಗೆ ದೇವಳದಲ್ಲಿ ಅನ್ನಪ್ರಸಾದ ಸ್ವೀಕರಿಸಿ ಬಿಜೆಪಿ ಕಚೇರಿಗೆ ತೆರಳಿದರು.ದೇವಳದ ಹೊರಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಅನುಷ್ಠಾನ ಹಂತದಲ್ಲಿರುವ ಎಲ್ಲ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಹಾಗೂ ಯಾವ ಯಾವ ಯೋಜನೆಗಳು ಯಾವ ಯಾವ ಹಂತದಲ್ಲಿದೆ ಎಂಬ ಕುರಿತು ಮಾಹಿತಿ ಪಡೆಯಲು ಜೂ. 19 ರಂದು ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಸಭೆಯ ಬಳಿಕ ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಅದರಲ್ಲೂ ಮಂಗಳೂರು ಮತ್ತು ಬೆಂಗಳೂರು ಮಧ್ಯೆ ರಸ್ತೆ ಮತ್ತು ರೈಲು ಸಂಪರ್ಕ ಸುಗಮಗೊಳಿಸುವುದು ಮೊದಲ ಆದ್ಯತೆಯಾಗಿದೆ ಎಂದರು.

ಶಿರಾಡಿ ಸುರಂಗ ಮಾರ್ಗ ಯೋಜನೆ:ಶಿರಾಡಿ ಸುರಂಗ ಮಾರ್ಗ ಕಾಮಗಾರಿ ನೆನೆಗುದಿಗೆ ಬಿದ್ದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದರು ರಸ್ತೆ ಕಾಮಗಾರಿ ಬಿಸಿರೋಡ್‌ನಿಂದ ಅಡ್ಡಹೊಳೆಯ ತನಕ ಕೆಲಸ ಕಾರ್ಯ ಮುಂದುವರಿಯುತ್ತಿದ್ದು, ಸಕಲೇಶಪುರದಲ್ಲಿ ಕಾಮಗಾರಿ ನಡೆಯುತ್ತಿದೆ. ಶಿರಾಡಿಯ ಸುರಂಗ ಮಾರ್ಗ ಯೋಜನೆ ನೆನೆಗುದಿಗೆ ಬಿದ್ದಿಲ್ಲ. ಸಕಲೇಶಪುರ ಮತ್ತು ಅಡ್ಡಹೊಳೆಯ ನಡುವಿನ ಶಿರಾಡಿ ಘಾಟಿಯನ್ನು ಏನು ಮಾಡಬೇಕೆಂಬ ಆಯ್ಕೆಗಳ ನಡುವೆ ಸುರಂಗ ಮಾರ್ಗ ಯೋಜನೆಯೂ ಸೇರಿಕೊಂಡಿದೆ. ಇದು ಯಾವ ಹಂತದಲ್ಲಿದೆ ಎಂದು ಅಧಿಕಾರಿಗಳ ಸಭೆ ಕರೆದು ವಿಚಾರಿಸುತ್ತೇನೆ ಎಂದು ಹೇಳಿದರು. ಪಕ್ಷದ ಕಚೇರಿಗೆ ತೆರಳಿದ ಬಳಿಕ ಸಂಘದ ಕಾರ್ಯಾಲಯ ಪಂಚವಟಿಗೆ ತೆರಳಿ ಅಲ್ಲಿಂದ ಸಂಘದ ಹಿರಿಯ ಕಾರ್ಯಕರ್ತ ಬಿರ್ಮಣ್ಣ ಗೌಡ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ಈ ಸಂದರ್ಭ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷ ವಿದ್ಯಾ ಗೌರಿ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್. ಶೆಟ್ಟಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಎಸ್.ಅಪ್ಪಯ್ಯ ಮಣಿಯಾಣಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ್, ಪ್ರಸನ್ನ ಕುಮಾರ್ ಮಾರ್ತ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ಉದಯ ಕುಮಾರ್ ಎಚ್, ಹರೀಶ್ ಬಿಜತ್ರೆ ಮತ್ತಿತರರು ಜೊತೆಗಿದ್ದರು.ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವಾದ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವರ ದರುಶನ ಮಾಡಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ವಿಶೇಷವಾಗಿ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ದೇಶದ ಪ್ರಧಾನಿಯಾಗಿರುವುದು ಹೆಮ್ಮೆಯ ಸಂಗತಿ. ಅವರಿಗೆ ಮತ್ತು ಅವರ ಇಡೀ ಸಚಿವ ಸಂಪುಟಕ್ಕೆ ದೇವರ ಆಶೀರ್ವಾದವಿರಲಿ ಎಂದು ಬಿಜೆಪಿ ಅಧ್ಯಕ್ಷರು ಮತ್ತು ಪ್ರಮುಖರ ಜೊತೆ ಸೇರಿಕೊಂಡು ಪ್ರಾರ್ಥನೆ ಮಾಡಿದ್ದೇವೆ.

ಕ್ಯಾ. ಬ್ರಿಜೇಶ್‌ ಚೌಟ, ಸಂಸದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!