ನಾಳೆಯಿಂದ 3 ದಿನ ಯುವ ಸಮ್ಮೇಳನ, ವಿಶೇಷ ಉಪನ್ಯಾಸ

KannadaprabhaNewsNetwork |  
Published : Jun 19, 2024, 01:08 AM IST
ಪೋಟೋ: 18ಎಸ್ಎಂಜಿಕೆಪಿ02ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲ್ಲಗಂಗೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಶ್ರಮದ ಸ್ಥಾಪನೆಯ 19ನೇ ವಾರ್ಷಿಕೋತ್ಸವದ ಅಂಗವಾಗಿ ಯುವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜೂ.20 ರಿಂದ 3 ದಿನಗಳ ಕಾಲ ಕಲ್ಲಗಂಗೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಶ್ರಮದ ಸ್ಥಾಪನೆಯ 19ನೇ ವಾರ್ಷಿಕೋತ್ಸವದ ಅಂಗವಾಗಿ ಯುವ ಸಮ್ಮೇಳನ ಹಾಗೂ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಧ್ಯಾತ್ಮ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತಿರುವ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮವು 2005ರಲ್ಲಿ ಇಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೂ ಹಲವಾರು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದು ಮಾಹಿತಿ ನೀಡಿದರು.

ಜೂ.20ರಂದು ಗುರುವಾರ ಬೆಳಗ್ಗೆ 10ಕ್ಕೆ ಕಲ್ಲಗಂಗೂರು ಆಶ್ರಮದ ಪ್ರಾರ್ಥನಾ ಮಂದಿರದಲ್ಲಿ ಯುವ ಸಮ್ಮೇಳನವು ಜರುಗಲಿದ್ದು, ಇದರ ಉದ್ಘಾಟನೆಯನ್ನು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪ.ಪೂ.ಶ್ರೀ ನಿರ್ಭಯಾನಂದರು ಉದ್ಘಾಟಿಸಲಿದ್ದು, ಬಳಿಕ ಭಾರತಕ್ಕೆ ಬೇಕಾಗಿರುವುದು ಉಜ್ವಲ ಭಾರತೀಯತೆ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುವರು. ಸಂಸದ ಬಿ.ವೈ.ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತಂದ ಕ್ಯಾ.ನವೀನ್ ನಾಗಪ್ಪ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ವಿವರಿಸಿದರು.

ಪ.ಪೂ.ಸ್ವಾಮಿ ವಿನಯಾನಂದ ಸರಸ್ವತಿ, ಪ.ಪೂ.ಸ್ವಾಮಿ ಪ್ರಕಾಶಾನಂದಜೀ ಮತ್ತು ಪ.ಪೂ. ಶ್ರೀ ಜ್ಞಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅದೇ ದಿನ ಸಂಜೆ 5.30ಕ್ಕೆ ವಿನೋಬನಗರ ವಿಪ್ರ ಟ್ರಸ್ಟ್‌ನಲ್ಲಿ ಜರುಗುವ ಶ್ರೀರಾಮಕೃಷ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀನಿರ್ಭಯಾನಂದ ಸರಸ್ವತಿ ಮಹಾರಾಜ್ ಸ್ವಾಮೀಜಿಯವರು ಸಾಧಕ ಚಕ್ರವರ್ತಿ ಶ್ರೀರಾಮಕೃಷ್ಣ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜೂ.21ರಂದು ಶುಕ್ರವಾರ ಸಂಜೆ 5.30ಕ್ಕೆ ವಿಪ್ರ ಟ್ರಸ್ಟ್‌ನಲ್ಲಿ ಹರಿಹರದ ರಾಮಕೃಷ್ಣ ವಿವೇಕಾನಂದಶ್ರಾಮದ ಸ್ವಾಮಿ ಶಾರದೇಶಾನಂದಜೀ ಮಹಾರಾಜ್‍ ಶಾರದಾ ದೇವಿಯವರ ಜೀವನ ಮತ್ತು ಸಾಧನೆಯ ಕುರಿತು ಪ್ರವಚನ ನೀಡಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪ.ಪೂ.ಶ್ರೀ ವಿನಾಯನಂದ ಸ್ವಾಮೀಜಿ, ಪ್ರಕಾಶನಂದ ಸ್ವಾಮೀಜಿ ಮತ್ತು ಶ್ರೀಜ್ಞಾನನಂದ ಸ್ವಾಮೀಜಿಯವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಜೂ.22ರಂದು ಶನಿವಾರ ಸಂಜೆ 5.30ಕ್ಕೆ ವಿನೋಬನಗರದ ವಿಪ್ರಟ್ರಸ್ಟ್‌ನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ರಾಣೆಬೆನ್ನೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ.ಪೂ. ಸ್ವಾಮಿ ಪ್ರಕಾಶನಂದಜೀ ಮಹಾರಾಜ್ ಅವರು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಸಂದೇಶಗಳು ಕುರಿತು ಮಾತನಾಡುವರು. ಶಿವಮೊಗ್ಗ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಮತ್ತು ಜ್ಞಾನಾನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸುವರು ಎಂದು ಮಾಹಿತಿ ನೀಡಿದರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ವೇದಘೋಷ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಭಾಗವಾನ್ ನಾಮ ಸಂಕೀರ್ತನ ಮೊದಲಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ದಾನಿಗಳಾದ ಡಾ.ಚಿಕ್ಕಸ್ವಾಮಿ, ಸೂರ್ಯನಾರಾಯಣ, ರೇಣುಕೇಶ್, ನಾಗೇಂದ್ರ ಶಿರೂರ್‍ಕರ್, ಶ್ರೀಕಾಂತ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ