ಜನಸ್ಪಂದನದ ಸದುಪಯೋಗ ಪಡೆದುಕೊಳ್ಳಿ: ತುರ್ವಿಹಾಳ

KannadaprabhaNewsNetwork | Published : Jan 24, 2024 2:00 AM

ಸಾರಾಂಶ

ಸಾರ್ವಜನಿಕರು ವೈಯಕ್ತಿಕ, ಗ್ರಾಮದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಬಸನಗೌಡ ತಿಳಿಸಿದರು. ಮಸ್ಕಿ ತಾಲೂಕಿನ ಕವಿತಾಳ ಸಮೀಪದ ಅಮೀನಗಡ ಮತ್ತು ಯತಗಲ್ ಗ್ರಾಮಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಮಸ್ಕಿ/ಕವಿತಾಳ

ಜನರು ತಮ್ಮ ವೈಯಕ್ತಿಕ ಹಾಗೂ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯದಡಿಯೇ ಜನಸ್ಪಂದನೆ ಸಭೆ ಆಯೋಜಿಸಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.

ಮಸ್ಕಿ ತಾಲೂಕಿನ ಕವಿತಾಳ ಸಮೀಪದ ಅಮೀನಗಡ ಮತ್ತು ಯತಗಲ್ ಗ್ರಾಮಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಮಹತ್ವದ ಸಭೆಯಾಗಿದ್ದು ಸಾರ್ವಜನಿಕರು ತಮ್ಮ ವೈಯಕ್ತಿಕ ಮತ್ತು ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ನಿಲುಗಡೆ, ಕೊಟೇಕಲ್ ಗ್ರಾಮದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಅಮೀನಗಡದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸುವುದು, ನೀರಿನ ಸಮಸ್ಯೆ, ಅಂಗನವಾಡಿ ಹತ್ತಿರ ಉಂಟಾದ ಗಲೀಜು ಸ್ವಚ್ಛಗೊಳಿಸುವುದು, ಮನೆಗಳ ಮಂಜೂರು ಮಾಡುವುದು ಮತ್ತಿತರ ಸಮಸ್ಯೆಗಳ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ವಾರ ಕೂಲಿ ಮಾಡಿದ ಕೂಲಿಕಾರರ ಖಾತೆಗೆ ಕೇವಲ 20 ರುಪಾಯಿ ಮತ್ತು ಒಂದು ನೂರು ರುಪಾಯಿ ಜಮಾ ಮಾಡಿದ್ದು, ಬೆಂಗಳೂರು ಮತ್ತಿತರ ಪಟ್ಟಣಗಳಿಗೆ ಹೊಟ್ಟೆ ಹೊರೆಯಲು ಗುಳೆ ಹೋದ ಕೂಲಿ ಕಾರ್ಮಿಕರ ಖಾತೆಗೆ ಖಾತ್ರಿ ಯೋಜನೆಯ ಹಣ ಜಮಾ ಮಾಡಿದ್ದಾರೆ ಎಂದು ಗ್ರಾಮದ ಪಂಪಾಪತಿ, ರಷೀದ್ ಮತ್ತು ಖಾಜಾಸಾಬ್ ಸೇರಿದಂತೆ ಕೂಲಿಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಆದರೆ ಎಂದು ಗ್ರಾಪಂ ಅಧ್ಯಕ್ಷ ಮೌನೇಶ ದೊಡ್ಮನಿ ಹೇಳಿದರು.

ತಾಲೂಕು ಅರೋಗ್ಯ ಅಧಿಕಾರಿ ಶರಣಬಸವ ಪಾಟೀಲ್, ಬಿಇಒ ಚಂದ್ರಶೇಖರ ದೊಡ್ಡಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಗ್ರಾಪಂನವರು, ಮುಖಂಡರು, ಗ್ರಾಮಸ್ಥರು ಇದ್ದರು.ಗ್ರಾಮಸ್ಥರಿಂದ ಶಾಸಕರಿಗೆ ಮನವಿ

ಯತಗಲ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಬಸ್ ಸೌಲಭ್ಯ, ಅರಣ್ಯ ಇಲಾಖೆ ವಶಪಡಿಸಿಕೊಂಡ ಭೂಮಿಯನ್ನು ಮರಳಿ ರೈತರಿಗೆ ಕೊಡಿಸುವುದು, ಸ್ಮಶಾನಕ್ಕೆ ಜಾಗ ಮಂಜೂರು, ಶಾಲೆಗೆ ವಿದ್ಯುತ್ ಸಂಪರ್ಕ, ನೀರಿನ ಸೌಲಭ್ಯ, ಹೆಚ್ಚುವರಿ ಕೊಠಡಿಗಳ ಮಂಜೂರು ಮಾಡುವುದು, ಚರಂಡಿ, ಕಾಂಕ್ರಿಟ್ ರಸ್ತೆ ನಿರ್ಮಾಣ, ಶಾಲೆ ಸ್ಥಳಾಂತರ ಮತ್ತು ಬಸ್ ತಂಗು ದಾಣ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕಗಳ ಕುರಿತು ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

Share this article