ಎಚ್ಚರಿಕೆಯಿಂದ ಮಕ್ಕಳ ಲಾಲನೆ, ಪಾಲನೆ ಮಾಡಿ

KannadaprabhaNewsNetwork |  
Published : May 25, 2025, 01:07 AM IST
ಸಿಕೆಬಿ-1 ತಾಲ್ಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿದಡಿ ನಿರ್ಮಿಸಿರುವ ಸಿ.ಸಿ. ರಸ್ತೆಯನ್ನು  ಸಿಇಓ ಪ್ರಕಾಶ್.ಜಿ.ಟಿ.ನಿಟ್ಟಾಲಿ ವೀಕ್ಷಿಸಿದರು | Kannada Prabha

ಸಾರಾಂಶ

ತಾಲೂಕಿನ ತಿಪ್ಪೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾರ್ಮಿಕರಿಗಾಗಿ ನಿರ್ಮಿಸಿರುವ ಕೂಸಿನ ಮನೆಗೆ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ತಿಪ್ಪೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾರ್ಮಿಕರಿಗಾಗಿ ನಿರ್ಮಿಸಿರುವ ಕೂಸಿನ ಮನೆಗೆ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ವೇಳೆ ಮಾತನಾಡಿದ ಸಿಇಒ, ಕೂಸಿನ ಮನೆ (ಶಿಶು ಪಾಲನಾ ಕೇಂದ್ರ)ಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿ-ನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ. ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಕೆಲಸದಿಂದ ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ. ಜೊತೆಗೆ ಪೌಷ್ಠಿಕ ಆಹಾರ ದೊರೆಯುವುದಿಲ್ಲ. ಇದರಿಂದ ಮಕ್ಕಳು ಅಪೌಷ್ಠಿಕತೆಗೆ ಒಳಗಾಗಬಹುದಾಗಿದೆ ಎಂದರು.

ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಈ ಯೋಜನೆ ಆರಂಭಿಸಿದೆ. ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ಈ ಕೂಸಿನ ಮನೆಯಲ್ಲಿ ನಿರ್ಮಾಣವಾಗಲಿ. 6 ತಿಂಗಳಿಂದ 3 ವರ್ಷದ ಒಳಗಿನ ಮಕ್ಕಳ ಲಾಲನೆ, ಪಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಮತ್ತು ಶುಚಿ ರುಚಿಯಾದ ಉಪಹಾರವನ್ನು ನೀಡಬೇಕು ಎಂದು ಕೂಸಿನ ಮನೆಯ ಆರೈಕೆದಾರರಿಗೆ ಸೂಚನೆಗಳನ್ನು ನೀಡಿದರು.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 20 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆಯನ್ನು ನಿರ್ಮಿಸಿಲಾಗಿದ್ದು, ಮಕ್ಕಳು ದಾಖಲಾಗದ ಕಾರಣ ಕೆಲವು ಕೂಸಿನ ಮನೆಗಳು ತೆರೆಯಲಾಗಿಲ್ಲ ಆದರೆ ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿಯ ಕೂಸಿನ ಮನೆಯು ಪ್ರಾರಂಭದಿಂದಲ್ಲೂ ಮಕ್ಕಳ ದಾಖಲಾತಿ ಚೆನ್ನಾಗಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ನಂತರ ಚಿಕ್ಕಬಳ್ಳಾಪುರ ತಾಲೂಕಿನ ಬೋದಗಾನಹಳ್ಳಿಯ ನರೇಗಾ ಯೋಜನೆಯ ಅಡಿಯಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಮತ್ತು ಚರಂಡಿಯ ಕಾಮಗಾರಿಗಳನ್ನು ಪರಿಶೀಲಿಸಿದರು. ಆ ನಂತರ ತಾಲೂಕಿನ ಅವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ ಕಾಮಗಾರಿ, ಹಾರೋಬಂಡೆ ಗ್ರಾಮ ಪಂಚಾಯ್ತಿಯ ಸಿ.ಸಿ. ರಸ್ತೆ ವೀಕ್ಷಿಸಿದರು.

ಕೊನೆಯದಾಗಿ ತಾಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ.ಸಿ. ರಸ್ತೆ ಹಾಗೂ ತೋಟಗಾರಿಕೆ ಇಲಾಖೆಯ ನರೇಗಾ ಯೋಜನೆಯಡಿಯ ದ್ರಾಕ್ಷಿ ನಾಟಿ ಕಾಮಗಾರಿಗಳನ್ನು ವೀಕ್ಷಿಸಿದ ಮಾತನಾಡಿ, ನರೇಗಾ ಯೋಜನೆಯಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಒಂಬುಡ್ಸ್‌ಮನ್ ಮತ್ತು ಆಯುಕ್ತಾಲಯದ ಉಚಿತ ಸಹಾಯವಾಣಿ ದಾಖಲಿಸುವಂತೆ ಸೂಚನೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಂಪೂರ್ಣ ಮಾಹಿತಿ ಒಳಗೊಂಡ ನಾಮಫಲಕ ಅಳವಡಿಸಲು ಹಣ ಮೀಸಲಿಡಲಾಗಿರುತ್ತದೆ. ಗ್ರಾಮ ಪಂಚಾಯ್ತಿ ಹಂತದ ಸಿಬ್ಬಂದಿ ಮೇಲೆ ತಾಲೂಕು ಹಂತದ ಸಿಬ್ಬಂದಿ ಮೇಲ್ವಿಚಾರಣೆ ಮಾಡಬೇಕು. ನಾಮಫಲಕದಲ್ಲಿ ಅಳವಡಿಸಿ ಜನರಿಗೆ ಮಾಹಿತಿ ದೊರಕುವಂತೆ ಮಾಡಬೇಕು ಎಂದರು.

ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಹೆಚ್ಚು ಆಸ್ತಿ ಸೃಜನೆ ಮಾಡುವ ಮೂಲಕ ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೆಲಸ ಮಾಡಬೇಕು. ಸಿಸಿ ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ತಾವು ಕಟ್ಟುನಿಟ್ಟಾಗಿ ನಿಗಾವಹಿಸುವ ಮೂಲಕ ಕಾಮಗಾರಿ ಲಾಭ ಜನ ಸಾಮಾನ್ಯರಿಗೆ ತಲುಪಿಸುವಂತೆ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನರೇಗಾ ಸಹಾಯಕ ನಿರ್ದೇಶಕ ರಫೀಕ್, ಜಿಲ್ಲಾ ಪಂಚಾಯತ್ ಎಡಿಪಿಸಿ ಹರೀಶ್, ತಿಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಮುನಿರಾಜು, ಹಾರೋಬಂಡೆ ಗ್ರಾಮ ಪಂಚಾಯ್ತಿ ಪಿಡಿಒ ನಾರಾಯಣಸ್ವಾಮಿ, ತಾಲೂಕು ತಾಂತ್ರಿಕ ಸಂಯೋಜಕ ಮಂಜುನಾಥ, ಐಇಸಿ ಸಂಯೋಜಕಿ ಪವಿತ್ರ, ಇಂಜಿನಿಯರ್ ಗಳಾದ ನಳಿನ, ಅಭಿಲಾಷ್ ಮತ್ತು ತಿಪ್ಪೇನಹಳ್ಳಿ, ಹಾರೋಬಂಡೆ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ