ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಗೆ ಸೇರುವಂತೆ ಕ್ರಮ ವಹಿಸಿ: ಸಂಸದ ಡಾ.ಕೆ.ಸುಧಾಕರ್ ಸೂಚನೆ
ಬಿಎಲ್ಎ-2 ಕಾರ್ಯಕರ್ತರು ಚುನಾವಣಾಧಿಕಾರಿಗಳ ಜೊತೆ ಇದ್ದು, ಅರ್ಹ ಮತದಾರರ ಹೆಸರು ಪಟ್ಟಿಗೆ ಸೇರುವಂತೆ ಕ್ರಮ ವಹಿಸಬೇಕಿದೆ. ಬಾಂಗ್ಲಾ ನಿವಾಸಿಗಳ ಸೇರಿದಂತೆ ಅನರ್ಹರ ಹೆಸರು ಮತದಾರರ ಪಟ್ಟಿಗೆ ಸೇರದಂತೆ ಎಚ್ಚರ ವಹಿಸಬೇಕೆಂದು ಸಂಸದ ಡಾ.ಕೆ. ಸುಧಾಕರ್ ಸೂಚನೆ ನೀಡಿದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-ಎಸ್‌ಐಆರ್ ಹಿನ್ನೆಲೆಯಲ್ಲಿ ನಗರದ ಸಂಸದರ ಗೃಹ ಕಚೇರಿಯಲ್ಲಿ ಶನಿವಾರ ನಡೆದ ಕ್ಷೇತ್ರದ ಬಿಎಲ್‌ಎ-2 ಕಾರ್ಯಕರ್ತರ ಜೊತೆಗಿನ ಸಭೆಯಲ್ಲಿ ಮಾತನಾಡಿ, ರಾಮನಗರದ ಕಲ್ಯಾಣ ಮಂಟಪದಲ್ಲಿ ವಿದೇಶಿ ಪ್ರಜೆಗಳನ್ನು ಕೂಡ ಸೇರಿಸಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಇದರಲ್ಲಿ ಬಾಂಗ್ಲಾ ನಿವಾಸಿಗಳು ಕೂಡ ಇದ್ದಾರೆ. ಕಾಂಗ್ರೆಸ್ ಸರ್ಕಾರ ಕೇವಲ ಮತಕ್ಕಾಗಿ ಇಂತಹ ಕೆಲಸ ಮಾಡುತ್ತಿದೆ. ಈ ಹಿಂದೆ ವಾಸ ದೃಢೀಕರಣ ಪತ್ರ ನೀಡುವ ಅಧಿಕಾರವನ್ನು ಪಿಡಿಒಗೆ ನೀಡಲು ಕ್ರಮ ವಹಿಸಲಾಗಿತ್ತು. ಅದಕ್ಕೂ ಮೊದಲು ಕಂದಾಯ ಇಲಾಖೆಗೆ ಮಾತ್ರ ಆ ಅಧಿಕಾರವಿತ್ತು. ಇದನ್ನು ನಾನು ಹಿರಿಯ ಗಮನಕ್ಕೆ ತಂದಿದ್ದು, ಅದನ್ನು ತಡೆಹಿಡಿಯಲಾಗಿದೆ.ಈಗ ಕಾಂಗ್ರೆಸ್ ಸರ್ಕಾರ ಬಾಂಗ್ಲಾ ನಿವಾಸಿಗಳಿಗೆ ವೋಟರ್ ಐಡಿ ಮಾಡಿಸಿಕೊಡುತ್ತಿದೆ. ಇದು ಅತ್ಯಂತ ದುರದೃಷ್ಟಕರವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೂ ಈ ರೀತಿ ಆಗದಂತೆ ಕಾರ್ಯಕರ್ತರು ಎಚ್ಚರ ವಹಿಸಬೇಕಿದೆ. ಮಂಚೇನಹಳ್ಳಿ, ಹಾರೋಹಳ್ಳಿ, ಮಂಡಿಕಲ್, ಪೆರೇಸಂದ್ರ ಮೊದಲಾದ ಭಾಗಗಳ ಮುಖಂಡರು ವಿಶೇಷ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಎಸ್ಐಆರ್‌ನ ಬಿಜೆಪಿ ರಾಜ್ಯ ಸಂಯೋಜಕ ದತ್ತಾತ್ರಿ, ವಿಭಾಗ ಸಂಯೋಜಕಿ ನಿಶ್ವಿತಾ ಗೌಡ, ಜಿಪಂ ಮಾಜಿ ಅಧ್ಯಕ್ಷ ಪಿ.ಏನ್. ಕೇಶವ ರೆಡ್ಡಿ, ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜು, ಚಿಕ್ಕಬಳ್ಳಾಪುರ ಬಿಎಲ್ಎ-1 ನಾರಾಯಣಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಆವಲಕೊಂಡರಾಯಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಪ್ರಸಾದ್ ರೆಡ್ಡಿ,ನಗರ ಸಭೆ ಮಾಜಿ ಅಧ್ಯಕ್ಷ ಗಜೇಂದ್ರ, ಜಿಲ್ಲಾ ವಕ್ತಾರ ವಿ.ಮಧುಚಂದ್ರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಅಶೋಕ್, ಮಂಡಲ ಅಧ್ಯರಾದ ತೆಜೇಂದ್ರ ಪಾಪು, ಪ್ರಭಾಕರ್ ರೆಡ್ಡಿ ಮತ್ತಿತರರು ಇದ್ದರು.