ಮಳೆ ಹಾನಿಗೆ ತಕ್ಷಣ ಕ್ರಮ ಕೈಗೊಳ್ಳಿ: ಡಾ ಮಂತರ್ ಗೌಡ

KannadaprabhaNewsNetwork |  
Published : May 30, 2025, 12:10 AM IST
ಕುಶಾಲನಗರದಲ್ಲಿ ನಡೆದ ಪ್ರಕೃತಿ ವಿಕೋಪ ವಿಪತ್ತು ಸಭೆ | Kannada Prabha

ಸಾರಾಂಶ

ಪ್ರಕೃತಿ ವಿಕೋಪ ತಡೆಗಟ್ಟುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಪ್ರಕೃತಿ ವಿಕೋಪ ತಡೆಗಟ್ಟುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಬ್ಬಂದಿ ದಿನದ 24 ಗಂಟೆ ಕಾಲ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅವರು ಕುಶಾಲನಗರದಲ್ಲಿ ನಡೆದ ಪ್ರಕೃತಿ ವಿಕೋಪ ವಿಪತ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿದ್ದು ಜೊತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಮರಗಳು ಮನೆ ಮೇಲೆ ಅಥವಾ ಸಾರ್ವಜನಿಕ ರಸ್ತೆಗೆ ಬೀಳುವ ಸಂದರ್ಭ ಹೆಚ್ಚಿನ ಹಾನಿ ಉಂಟಾಗುತ್ತಿದೆ.

ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಧಿಕಾರಿಗಳಿಗೆ ಹೇಳಿದರು. ಪಂಚಾಯಿತಿ ಪುರಸಭೆ ತಾಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಬೇಕು ಶಾಲೆ ಅಥವಾ ಖಾಸಗಿ ಕಲ್ಯಾಣ ಮಂಟಪ ಸಿದ್ಧವಾಗಿರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಎಂದರು. ಮೂಲಭೂತ ವ್ಯವಸ್ಥೆ ಕಲ್ಪಿಸಿ:

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಅಗತ್ಯವಾಗಿರುವ ಆಹಾರ ಮತ್ತು ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಈ ಸಂಬಂಧ ಸಮರ್ಪಕ ಮಾಹಿತಿ ಉಳ್ಳ ಪಟ್ಟಿ ತಯಾರಿಕೆಗೆ ಸ್ಥಳೀಯ ಆಡಳಿತದ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆ ಬದಿಯಲ್ಲಿ ಹಾಗೂ ಮನೆಗಳ ಅಂಚಿನಲ್ಲಿ ಇರುವ ಅಪಾಯಕಾರಿ ಮರಗಳ ತೆರವುಗೊಳಿಸುವುದು ಈ ಸಂಬಂಧ ಇಲಾಖೆಗಳು ಸಮನ್ವಯ ಕಾಪಾಡುವ ಮೂಲಕ ಜನರ ಸೇವೆಗೆ ಸಿದ್ಧರಾಗಬೇಕಾಗಿದೆ ಎಂದರು. ಮೊಬೈಲ್ ಸ್ವಿಚ್ ಆಫ್ ಆಗಬಾರದು:

ಪ್ರತಿ ಹಂತದ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದು ಮತ್ತು ಅಗತ್ಯ ಸೌಲಭ್ಯಗಳನ್ನು ಜನರಿಗೆ ಕಲ್ಪಿಸುವುದು ಜವಾಬ್ದಾರಿಯಾಗಿದೆ ಎಂದ ಶಾಸಕರು ಯಾವುದೇ ಹಂತದಲ್ಲಿಯೂ ಅಧಿಕಾರಿ ಸಿಬ್ಬಂದಿಗಳ ಮೊಬೈಲ್ ಸ್ವಿಚ್ ಆಫ್ ಆಗಬಾರದು ಎಂದು ಎಚ್ಚರಿಕೆ ನೀಡಿದರು.ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಸಂಸ್ಥೆಗೆ ಈಗಾಗಲೇ ಒಟ್ಟು 76 ಜನ ಜಿಲ್ಲೆಗೆ ಹೆಚ್ಚುವರಿ ಸಿಬ್ಬಂದಿ ಆಗಮಿಸಿದ್ದು ಕುಶಾಲನಗರ ವ್ಯಾಪ್ತಿಯಲ್ಲಿ 10 ಮಂದಿ ನಿಯೋಜನೆ ಗೊಳಿಸಲಾಗಿದೆ ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆಗಳಿಂದ ಸಿಬ್ಬಂದಿಗಳನ್ನು ಕರೆಸಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂಬಂಧ ಸೆಸ್ಕ್ ಅಧಿಕಾರಿ ಬಸವರಾಜ್ ಅವರಿಂದ ಪೂರ್ಣ ವಿವರ ಪಡೆದರು. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ಕಳೆದ ಕೆಲವು ದಿನಗಳ ಮಳೆ ಗಾಳಿಯಿಂದ 156 ವಿದ್ಯುತ್ ಕಂಬಗಳು ಮರಿದುಬಿದ್ದಿವೆ. ಇದನ್ನು ಸರಿಪಡಿಸಲಾಗುತ್ತಿದೆ ಎಂದು ಬಸವರಾಜ್ ಹೇಳಿದರು ನದಿ ತೀರದ ಗ್ರಾಮಗಳ ನಿವಾಸಿಗಳನ್ನು ಶಾಶ್ವತವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾರಂಗಿ ಜಲಾಶಯದಲ್ಲಿ ಹೆಚ್ಚುವರಿ ನೀರನ್ನು ತಕ್ಷಣ ನದಿಗೆ ಹರಿಸಬೇಕು. ಯಾವುದೇ ಸಂದರ್ಭ ಪ್ರವಾಹ ಪರಿಸ್ಥಿತಿ ಎದುರಾಗಬಾರದು ಎಂದು ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ ಜೆ ಪುಟ್ಟಸ್ವಾಮಿ ಅವರಿಗೆ ಶಾಸಕರು ಸಲಹೆ ನೀಡಿದರು.ಜಲಾಶಯದಲ್ಲಿ 10 ಅಡಿಗಳಷ್ಟು ನೀರಿನ ಸಂಗ್ರಹ ಅಂತರ ಇಟ್ಟುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು ಎಂದು ಪುಟ್ಟಸ್ವಾಮಿ ಸಭೆಯಲ್ಲಿ ತಿಳಿಸಿದರು. ಗ್ರಾಮಾಂತರ ಪ್ರದೇಶದ ಬಗ್ಗೆ ನಿರಂತರ ಗಮನ:

ಪ್ರತಿಯೊಬ್ಬ ಅಧಿಕಾರಿಗಳು ಗ್ರಾಮಾಂತರ ಪ್ರದೇಶದ ಬಗ್ಗೆ ನಿರಂತರವಾಗಿ ಗಮನಹರಿಸುವಂತಾಗಬೇಕು ಎಂದು ಶಾಸಕರು ಹೇಳಿದರು. ಯಾವುದೇ ಸಂದರ್ಭ ಮಾನವ ಜೀವ ಹಾನಿಯಾಗದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು. ಇಲಾಖೆಗಳ ಅಧಿಕಾರಿಗಳು ತಮ್ಮ ಗ್ರಾಮ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಅಂಕಿ ಅಂಶಗಳ ಮಾಹಿತಿಯನ್ನು ಸಭೆಗೆ ಒದಗಿಸಿದರು. ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಪರಮೇಶ್ವರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ ಪಿ ಶಶಿಧರ್ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಮುಖ್ಯ ಅಧಿಕಾರಿ ಗಿರೀಶ್, ಕೆಡಿಪಿ ಸದಸ್ಯರಾದ ಟಿ ಬಿ ಜಗದೀಶ್, ಕೆ ಎನ್ ಅಶೋಕ್, ಹಮೀದ್, ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಮೂಲ್ ಸೌಲಭ್ಯ ಸದುಪಯೋಗಪಡೆಯಿರಿ: ರೈತರಿಗೆ ಸತೀಶ್ ಸಲಹೆ
ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ