ಮದ್ಯ ಮಾರಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ

KannadaprabhaNewsNetwork |  
Published : Oct 26, 2026, 03:30 AM IST
ಎಚ್.ಡುಂಡಿರಾಜ್‌ ಕಾರ್ಯಕ್ರಮದಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಮದ್ಯಪಾನದ ದುಷ್ಪರಿಣಾಮ ತಡೆಯಲು ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲಿಯೂ ಜಾಗೃತಿ ಮೂಡಿಸಬೇಕು.

ಕುಷ್ಟಗಿ: ಮದ್ಯದ ಚಟಕ್ಕೆ ಕುಟುಂಬಗಳು ನಲುಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ನಿರ್ಲಕ್ಷಿಸದೆ, ಮದ್ಯ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಪಾನದಿಂದ ಕುಟುಂಬಗಳ ನೆಮ್ಮದಿ ಹಾಳಾಗುತ್ತಿದೆ. ಕೆಲವು ಕಡೆ ಮದ್ಯಪಾನ ಮಾಡಿ ಮನೆಗೆ ಬರುವ ಪುರುಷರು ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುವ ಘಟನೆಗಳೂ ನಡೆಯುತ್ತಿವೆ. ಇದರಿಂದ ಮಹಿಳೆಯರು ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕಡಿವಾಣ ಅಗತ್ಯ: ಮದ್ಯಪಾನದ ದುಷ್ಪರಿಣಾಮ ತಡೆಯಲು ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲಿಯೂ ಜಾಗೃತಿ ಮೂಡಿಸಬೇಕು. ಶಾಲಾ-ಕಾಲೇಜುಗಳು ಹಾಗೂ ಜನವಸತಿ ಪ್ರದೇಶಗಳ ಸಮೀಪ ಮದ್ಯದಂಗಡಿಗಳಿಗೆ ಅನುಮತಿ ನೀಡುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನುಬಾಹಿರ ಮದ್ಯ ಮಾರಾಟ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಮದ್ಯ ಮಾರಾಟದಿಂದ ಸರ್ಕಾರಕ್ಕೆ ಆದಾಯ ದೊರೆಯುತ್ತದೆ ಎಂಬ ಕಾರಣಕ್ಕೆ ಜನರ ಆರೋಗ್ಯ, ಮಹಿಳೆಯರ ಸುರಕ್ಷತೆ ಮತ್ತು ಕುಟುಂಬಗಳ ನೆಮ್ಮದಿಯನ್ನು ಕಡೆಗಣಿಸಬಾರದು. ಅಬಕಾರಿ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಗಳಲ್ಲಿ ಮದ್ಯ ಮಾರಾಟದ ಗುರಿ ತಲುಪುವ ಒತ್ತಡದ ಕುರಿತು ಚರ್ಚೆಯಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದರು.

ಸ್ಥಳೀಯ ಆಡಳಿತಕ್ಕೂ ಜವಾಬ್ದಾರಿ: ಗ್ರಾಮಗಳಲ್ಲಿ ಮದ್ಯದಂಗಡಿಗಳಿಂದ ಸಮಸ್ಯೆಗಳು ಉಂಟಾಗುತ್ತಿದ್ದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗೂ ಸರ್ಕಾರವನ್ನೇ ದೂಷಿಸುವ ಬದಲು ಸ್ಥಳೀಯ ಮಟ್ಟದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆಯೂ ಗಮನಹರಿಸಬೇಕು ಎಂದರು.

ಶೇ. 75ರಷ್ಟು ಸ್ಪಂದನೆ: ಮಹಿಳಾ ಆಯೋಗದ ಶಿಫಾರಸುಗಳಿಗೆ ಸರ್ಕಾರದಿಂದ ಸುಮಾರು ಶೇ. 75ರಷ್ಟು ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ. ಉಳಿದ ಶೇ. 25ರಷ್ಟು ವಿಚಾರಗಳಲ್ಲಿ ತಾಂತ್ರಿಕ ಸಮಸ್ಯೆ, ಅನುದಾನದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಾಗದಿರಬಹುದು. ಈ ಕುರಿತು ಸಂಬಂಧಪಟ್ಟ ಕಾರಣಗಳನ್ನು ಸರ್ಕಾರ ತಿಳಿಸುತ್ತದೆ ಎಂದರು.

ಆಯೋಗದ ಕಾರ್ಯಚಟುವಟಿಕೆಯಲ್ಲಿ ರಾಜಕೀಯ ಹಸ್ತಕ್ಷೇಪದ ಅನುಭವವಾಗಿಲ್ಲ. ಮಹಿಳೆಯರ ಸಮಸ್ಯೆಗಳಿಗೆ ನ್ಯಾಯ ಒದಗಿಸುವುದು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು ಆಯೋಗದ ಪ್ರಮುಖ ಉದ್ದೇಶವಾಗಿದೆ ಎಂದರು.

ಆತಂಕಕಾರಿ: ಕೆಲವು ಸ್ಟಿಂಗ್ ಆಪರೇಷನ್‌ಗಳಲ್ಲಿ ಮಹಿಳೆಯರನ್ನು ಬಳಸಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಅವರು, ಇತರರ ಸ್ವಾರ್ಥಕ್ಕಾಗಿ ಮಹಿಳೆಯರನ್ನು ಬಳಸಿಕೊಂಡು ನಂತರ ಅವರ ಭವಿಷ್ಯ ಮತ್ತು ಗೌರವದ ಜವಾಬ್ದಾರಿ ವಹಿಸದಿರುವ ಸಾಧ್ಯತೆ ಇದೆ. ಇಂತಹ ಚಟುವಟಿಕೆಯಲ್ಲಿ ತೊಡಗುವ ಮೊದಲು ಮಹಿಳೆಯರು ಅದರ ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು. ಮಹಿಳೆಯರ ಸಾಮಾಜಿಕ ಗೌರವ ಮತ್ತು ಭವಿಷ್ಯದ ರಕ್ಷಣೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶತ ಶತಮಾನದಿಂದಲೂ ಅಭಿವೃದ್ಧಿ ಕಾಣದ ಸ್ಮಾರಕ
ಅಯೋಡಿನ್ ಯುಕ್ತ ಉಪ್ಪು ಕುಟುಂಬದ ಆರೋಗ್ಯ ಸಂರಕ್ಷಕ: ಡಾ. ಪ್ರೀತ್