ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಮದ್ದೂರು ಕ್ಷೇತ್ರದ ವಿವಿಧ ಇಲಾಖೆ ಅಭಿವೃದ್ಧಿ ಕಾರ್ಯಕ್ರಮಗಳ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರ ವ್ಯಾಪ್ತಿ ಆಬಲವಾಡಿ, ಹಾಗಲಹಳ್ಳಿ, ಕಬ್ಬಾರೆ, ಅಣ್ಣೂರು, ಕಾರ್ಕಳ್ಳಿ, ಕೆ.ಎಚ್.ಕೊಪ್ಪಲು, ಕೆರಮೇಗಲದೊಡ್ಡಿ, ದೇವರಹಳ್ಳಿ, ಗೌಡಯ್ಯನದೊಡ್ಡಿ, ಕುರಿಕೆಂಪನ ದೊಡ್ಡಿ, ಚನ್ನಸಂದ್ರ, ಕೆ.ಹೊನ್ನಲಗೆರೆ, ಡಿ.ಮಲ್ಲಿಗೆರೆ, ರಾಜೇಗೌಡನದೊಡ್ಡಿ, ಕದಲಿಪುರ, ಬೆಳತೂರು, ಆನೆದೊಡ್ಡಿ ಸೇರಿದಂತೆ 16 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂದಿದೆ ಎಂದರು.
ಸಮಸ್ಯೆ ನಿವಾರಣೆಗೆ ಹಾಲಿ ಕೆಟ್ಟು ನಿಂತಿರುವ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿ ನೀರು ಪೂರೈಕೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೆಲವು ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ಬಳಸುತ್ತಿರುವ ರೈತರ ಕೊಳವೆ ಬಾವಿಗಳ ಮೂಲಕವೂ ಹಣ ಪಾವತಿ ಮಾಡಿ ಸಮಸ್ಯೆ ತೀವ್ರವಾಗಿರುವ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಜಲಜೀವನ್ ಮಿಷನ್ ಯೋಜನೆ ಈಗಾಗಲೇ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇವುಗಳನ್ನು ಚಾಲನೆಗೊಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಒಂದು ತಿಂಗಳು ಗಡುವು ನೀಡಲಾಗಿದೆ. ಈ ಸಂಬಂಧ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಅಲ್ಲದೇ, ನೀರಿನ ಸಮಸ್ಯೆ ತೀವ್ರವಾಗಿರುವ ಕಡೆಗಳಲ್ಲಿ ಮರು ಟೆಂಡರ್ ಕರೆದು ಬೋರ್ ವೆಲ್ ಅಳವಡಿಸಲು ತಾಕೀತು ಮಾಡಲಾಗಿದೆ ಎಂದರು.
ಬೇಸಿಗೆ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಮತ್ತು ಗ್ರಾಪಂ ಪಿಡಿಒಗಳು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕೆಲವೊಂದು ಸರ್ಕಾರಿ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಖಾಲಿ ಇರುವ ಸರ್ಕಾರಿ ನಿವೇಶನಗಳಲ್ಲಿ ಅಧಿಕಾರಿಗಳ ವಸತಿ ಗೃಹ ನಿರ್ಮಿಸಿ ಮೂಲ ಸೌಲಭ್ಯ ದೊರಕಿಸಲಾಗುವುದು ಎಂದು ಭರವಸೆ ನೀಡಿದರು.