ಗದಗ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣ ಮಾಡಲು ಗುಣಮಟ್ಟದ ಲಾರ್ವಾ ಸಮೀಕ್ಷೆ ಹಾಗೂ ಜ್ವರ ಸಮೀಕ್ಷೆ ಮಾಡಿ ಖಚಿತ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಸೂಕ್ತ ಆರೈಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ಇಲ್ಲಿಯ ಗಂಗಾಪೂರ ಪೇಟೆ, ದುರ್ಗಾದೇವಿ ದೇವಸ್ಥಾನ ಹತ್ತಿರ ಶನಿವಾರ ಜಿಲ್ಲಾ ಆಡಳಿತ, ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಘೀ ದಿನದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಜಾಥಾ ಮತ್ತು ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಜಿಲ್ಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಗುಣಮಟ್ಟದ ಲಾರ್ವಾ ಸಮೀಕ್ಷೆ ಮಾಡಲು ಗ್ರಾಮೀಣ, ಶಹರ ಮಟ್ಟದಲ್ಲಿ ಹೆಚ್ಚಿನ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಡೆಂಘೀ ಪ್ರಕರಣಗಳು ಕಂಡು ಬರಲಾರದ ಹಾಗೇ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎಚ್.ಎಲ್. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಡೆಂಘೀ ನಿವಾರಣೆ ನಿಟ್ಟಿನಲ್ಲಿ ಸಮುದಾಯ ಪಾತ್ರವು ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವು ದೊರೆತಾಗ ಮಾತ್ರ ಗುರಿ ಸಾಧಿಸಲು ಸುಲಭವಾಗುತ್ತದೆ ಎಂದರು.ಈ ವೇಳೆ ತಾಲೂಕು ಆರೋಗ್ಯಧಿಕಾರಿ ಡಾ. ಪ್ರೀತ್ ಖೊನಾ, ಅನ್ನಪೂರ್ಣ ಶೆಟ್ಟರ, ಡಾ. ಸ್ಪರ್ಷಾ, ಪುಷ್ಪಾ ಪಾಟೀಲ, ಗೀತಾ, ಇಬ್ರಾಹಿಂ ಮಕಾಂದಾರ, ಆನಂದ ಬದಿ ಸೇರಿದಂತೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು. ರೋಪಸೇನ ಚವಾಣ ಸ್ವಾಗತಿಸಿದರು. ಅಜಯಕುಮಾರ ಕಲಾಲ ವಂದಿಸಿದರು.