ಕೊಪ್ಪಳ: ಮಳೆಗಾಲದಲ್ಲಿ ಜನ-ಜಾನುವಾರುಗಳ ಪ್ರಾಣ ಹಾನಿ ತಡೆಗೆ ಹಾಗೂ ಹಾನಿಗೆ ತಕ್ಕಂತೆ ಪರಿಹಾರ ಒದಗಿಸುವುದಕ್ಕೆ ಎಲ್ಲ ರೀತಿಯ ಅಗತ್ಯ ಕ್ರಮ ವಹಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಜಾಗ್ರತೆಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಕಡೆ ಹಾನಿ ಸಂಭವಿಸಿದಾಗ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಪರಿಶೀಲಿಸಬೇಕು. ಜೀವ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿಗೆ ಪರಿಹಾರ ಕಾರ್ಯ ತ್ವರಿತಗೊಳಿಸಬೇಕು. ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸಿ ಸ್ಪಂದನೆ ನೀಡಬೇಕು ಎಂದು ಶಾಸಕರು ಕಂದಾಯ, ಜೆಸ್ಕಾಂ, ಪಶುಪಾಲನೆ, ಕೃಷಿ, ತೋಗಾರಿಕಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಿನ್ನಾಳ ಗ್ರಾಮ ಸೇರಿದಂತೆ ಆರು ಕಡೆಗಳಲ್ಲಿನ ಸಾರ್ವಜನಿಕ ಶೌಚಾಲಯಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಎಂದರೇ ಹೇಗೆ ಎಂದು ಪ್ರಶ್ನೆ ಮಾಡಿದರು.
ಹಿಂದುಳಿದ ಕಿನ್ನಾಳ ಪ್ರದೇಶದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ವಿದ್ಯುತ್ ಸೌಕರ್ಯ ಕೊಡಲು ವಿಳಂಬ ವಹಿಸಿದ ಕೊಪ್ಪಳ ಜೆಸ್ಕಾಂ ಅಧಿಕಾರಿಗೆ ಶಾಸಕರು ತರಾಟೆ ತೆಗೆದುಕೊಂಡರು. ನಾಲ್ಕಾರು ಬಾರಿ ಗಂಗಾವತಿಗೆ ಅಲೆದು ಕಿನ್ನಾಳ ಗ್ರಾಮದ ಶೌಚಾಲಯಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸಿ ಎಂದು ಮನವಿ ಹಿಡಿದು ಬಂದ ಕಿನ್ನಾಳ ಗ್ರಾಮದ ಗ್ರಾಪಂ ಸದಸ್ಯೆ ಕಮಲಮ್ಮ ಅವರಲ್ಲಿನ ಮಾನವೀಯತೆ, ಕಾಳಜಿ ಭಾವನೆ ಅಧಿಕಾರಿಗಳು ಸಹ ರೂಢಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.ಕಿನ್ನಾಳ ಸೇರಿದಂತೆ 6 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ವಿದ್ಯುತ್ ಸಂಪರ್ಕ ಸೇರಿದಂತೆ ನಾನಾ ಕಾರ್ಯಗಳ ಬಗ್ಗೆ ಶಿಸ್ತುಬದ್ಧ ಕೆಲಸ ನಿರ್ವಹಿಸಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಆನೆಗೊಂದಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯಾಧಿಕಾರಿಗಳು ಇಲ್ಲದ ವಿಷಯವು ಸಭೆಯಲ್ಲಿ ಪ್ರಸ್ತಾಪವಾಯಿತು. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವೈದ್ಯಾಧಿಕಾರಿಗಳಿಗೆ ಸರಿಯಾಗಿ ಕಾರ್ಯ ಹೊಂದಾಣಿಕೆ ಮಾಡುವಂತೆ ಪ್ರಸ್ತಾವನೆ ಡಿಎಚ್ಓ ಅವರಿಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಎಲ್ಲ ವಸತಿ ನಿಲಯಗಳಿಗೆ ನಿಯಮಿತ ಭೇಟಿ ನೀಡಿ, ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಪ್ರತಿ 2 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಾರ್ಯ ನಡೆಸುವಂತೆ ಶಾಸಕರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.