20 ಮರಳು ದಿಬ್ಬ ತೆರವುಗೊಳಿಸಿದ್ದಲ್ಲಿ 12,44,878 ಟನ್ ಮರಳು ದೊರೆಯಲಿದೆ. ಈ ಮೂಲಕ ಮರಳಿನ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆ.
ಕಾರವಾರ:
ಜಿಲ್ಲೆಯಲ್ಲಿ ಈಗಾಗಲೇ ನದಿ ಪಾತ್ರಗಳಲ್ಲಿ ಗುರುತಿಸಲಾಗಿರುವ ಮರಳು ದಿಬ್ಬ ತೆರವುಗೊಳಿಸಿ, ಜನತೆಗೆ ಶೀಘ್ರದಲ್ಲಿ ಮರಳು ವಿತರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಮರ್ಪಕವಾಗಿ ಮರಳು ದೊರೆಯದ ಹಿನ್ನೆಲೆಯಲ್ಲಿ ವಸತಿ, ಕಟ್ಟಡ ನಿರ್ಮಾಣ ಚಟುವಟಿಕೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರ ತೊಂದರೆಯಾಗಿದೆ. ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಾರೆ. ಮರಳಿನ ಕೊರೆತಯ ಹಿನ್ನಲೆ ಅನಧಿಕೃತ ಹಾಗೂ ಅಕ್ರಮ ಮರಳುಗಾರಿಗೆ, ಸಾಗಾಣಿಕೆ ಸಹ ನಡೆಯುತ್ತಿದ್ದು ಇದನ್ನು ನಿಯಂತ್ರಿಸಲು ಮರಳು ವಿತರಣೆಗೆ ಅನುಮತಿ ನೀಡುವುದು ಅತ್ಯಂತ ಅವಶ್ಯಕ ಎಂದು ಸಚಿವರು ತಿಳಿಸಿದರು.ಮರಳು ದಿಬ್ಬ ತೆರವುಗೊಳಿಸಿ, ಮರಳು ವಿತರಿಸುವ ಕುರಿತಂತೆ ಇರುವ ಅಡೆತಡೆಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೇಂದ್ರ ಕಚೇರಿಯಿಂದ ಅಗತ್ಯ ನಿರ್ದೇಶನ ಪಡೆದುಕೊಳ್ಳಿ. ಕಾನೂನು ಹಾಗೂ ನಿಯಮಗಳ ಉಲ್ಲಂಘನೆಯಾಗದಂತೆ ವ್ಯವಸ್ಥಿತ ರೀತಿಯಲ್ಲಿ ಮರಳು ವಿತರಿಸುವ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಪರಿಶೀಲಿಸಿ, ಆದಷ್ಟು ಶೀಘ್ರದಲ್ಲಿ ಜನರಿಗೆ ಮರಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ನಿದೇರ್ಶನ ನೀಡಿದರು.ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರಿಕೆ, ಲೋಕೋಪಯೋಗಿ, ಸಿ.ಆರ್. ಝಡ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಎನ್.ಐ.ಟಿ.ಕೆ. ಸುರತ್ಕಲ್ ತಜ್ಞರಿಂದ ಪರಿಶೀಲಿಸಿ ವರದಿ ಪಡೆದಿರುವ, ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದಲ್ಲಿ 7, ಅಂಕೋಲಾ ತಾಲೂಕಿನ ಗಂಗಾವಳಿ ನದಿ ಪಾತ್ರದಲ್ಲಿ 2, ಕುಮಟಾ ತಾಲೂಕಿನ ಅಘನಾಶಿನಿ ನದಿ ಪಾತ್ರದಲ್ಲಿ 4 ಮತ್ತು ಹೊನ್ನಾವರ ತಾಲೂಕಿನ ಶರಾವತಿ ನದಿ ಪಾತ್ರದಲ್ಲಿ 7 ಮರಳು ದಿಬ್ಬ ಸೇರಿದಂತೆ ಒಟ್ಟೂ 20 ಮರಳು ದಿಬ್ಬ ತೆರವುಗೊಳಿಸಿದ್ದಲ್ಲಿ 12,44,878 ಟನ್ ಮರಳು ದೊರೆಯಲಿದೆ ಎಂದರು.ಮರಳು ದಿಬ್ಬಗಳ ತೆರವುಗೊಳಿಸುವಿಕೆಯಿಂದ ದೊರೆಯುವ ಮರಳನ್ನು ಜಿಲ್ಲೆಯ ಜನರಿಗೆ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡುವಂತೆ ತಿಳಿಸಿದ ಸಚಿವರು, ಈ ಮರಳು ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಸಾಗಾಣಿಕೆಯಾಗದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಪೊಲೀಸ್, ಕಂದಾಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಸಿ.ಟಿ. ಜಯಕುಮಾರ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ, ಪರಿಸರ, ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.